ಬೆಂಗಳೂರು : ರಾಜ್ಯದಲ್ಲಿ ಜನಸಂದಣಿ ನಿಯಂತ್ರಿಸಲು ಹಾಗೂ ಅವಘಡಗಳನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ‘ಕರ್ನಾಟಕ ಜನಸಂದಣಿ ನಿಯಂತ್ರಣ ಮಸೂದೆ-2025’ ಅನ್ನು ಸದನದಲ್ಲಿ ಮಂಡಿಸಿದ್ದಾರೆ. ಈ ಮಸೂದೆಗೆ ಒಪ್ಪಿಗೆ ಸಿಕ್ಕರೆ, ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದರೆ ಭಾರಿ ದಂಡ ಮತ್ತು ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ.
ಶಿಕ್ಷೆ ಮತ್ತು ದಂಡದ ವಿವರಗಳು
- ಅನುಮತಿ ರಹಿತ ಕಾರ್ಯಕ್ರಮ: ಯಾವುದೇ ಕಾರ್ಯಕ್ರಮ ಅಥವಾ ಜನಸಂದಣಿಯನ್ನು ಅನುಮತಿ ಇಲ್ಲದೆ ಆಯೋಜಿಸಿದರೆ, ಕನಿಷ್ಠ 3 ರಿಂದ 7 ವರ್ಷಗಳ ಜೈಲು ಶಿಕ್ಷೆ ಅಥವಾ 1 ಕೋಟಿ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
- ಅವಘಡ ಸಂಭವಿಸಿದರೆ: ಜನಸಂದಣಿ ವಿಪತ್ತಿಗೆ ಕಾರಣರಾದ ಅಥವಾ ನಿರ್ಲಕ್ಷ್ಯ ವಹಿಸಿದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಕಾದಿದೆ.
- ಪ್ರಾಣಹಾನಿಯಾದರೆ: ದುರಂತಕ್ಕೆ ಕಾರಣರಾದವರಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.
- ಗಾಯಗಳಾದರೆ: ಜನಸಂದಣಿಯಲ್ಲಿ ಗಾಯಗಳು ಉಂಟಾದರೆ, ಅದಕ್ಕೆ ಕಾರಣರಾದವರಿಗೆ 3 ರಿಂದ 7 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಮಸೂದೆಯು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಜಾಗರೂಕತೆಯಿಂದ ಸಂಭವಿಸುವ ದುರಂತಗಳನ್ನು ತಡೆಯಲು ಸಹಾಯಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.