ತಿಂಗಳ ಮುಟ್ಟಿನ ಸಮಯದಲ್ಲಿ ಹೆಚ್ಚಿನವರು ಆರಂಭದ ದಿನ ಮತ್ತು ನಾಲ್ಕನೆಯ ದಿನ ತಲೆಸ್ನಾನ ಮಾಡುತ್ತಾರೆ. ಇದು ಸಂಪ್ರದಾಯವೆನ್ನುವ ಕಾರಣಕ್ಕೆ ಕೆಲವರು ಮಾಡುತ್ತಿದ್ದರೂ, ಆ ಸಂದರ್ಭದಲ್ಲಿ ಆಗುವ ಕಿರಿಕಿರಿ ಮತ್ತು ದೇಹದಲ್ಲಿ ಏನೋ ಹಿಂಸೆ ಎನಿಸುವುದರಿಂದ ತಲೆಸ್ನಾನ ಮಾಡಿದರೆ ಉಲ್ಲಾಸ ಕಾಣಬಹುದು ಎನ್ನುವ ಕಾರಣಕ್ಕೂ ಹಲವರು ಮಾಡುವುದು ಇದೆ.
ಆದರೆ ಮಾಸಿಕ ಋತುಸ್ರಾವದ ಮೊದಲು ಮೂರು ದಿನ ತಲೆ ಸ್ನಾನ ಮಾಡಬಾರದು ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸೂಕ್ತ ವೈಜ್ಞಾನಿಕ ಆಧಾರಗಳು ಇಲ್ಲದಿದ್ದರೂ ಮೊದಲ ಮೂರು ದಿನ ತಲೆಸ್ನಾನ ಮಾಡಿದರೆ ಮಹಿಳೆಯರ ದೇಹದಲ್ಲಿ ಕೆಲ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ. ಮೊದಲ ಮೂರು ದಿನ ಮುಟ್ಟಿನ ಸಮಯದಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ.
ಮೊದಲೇ ದೇಹದಲ್ಲಿ ಏರುಪೇರಾಗುತ್ತಿರುತ್ತದೆ. ಇಂಥ ಸಮಯದಲ್ಲಿ ತಲೆಸ್ನಾನ ಅದರಲ್ಲಿಯೂ ತಣ್ಣೀರಿನ ಸ್ನಾನ ಮಾಡಿದರೆ ದೇಹದ ಉಷ್ಣಾಂಶದಲ್ಲಿ ಏರುಪೇರಾಗುತ್ತದೆ. ಇದು ಅನಾರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು ಎನ್ನಲಾಗಿದೆ. ಇದರಿಂದ ತಲೆನೋವು ಅಥವಾ ಸ್ನಾಯು ಸೆಳೆತ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದು ಕೇಳಿಬರುತ್ತಿರುವ ಮಾತು.
ಬಿಸಿ ನೀರಿನಿಂದ ಸ್ನಾನ ಮಾಡಿದರೆ ಹಿತ ಎನ್ನಿಸುವುದು ನಿಜವಾದರೂ, ಕೂದಲನ್ನು ಹೆಚ್ಚು ಸಮಯದವರೆಗೆ ಹಸಿಯಾಗಿಯೇ ಬಿಟ್ಟುಕೊಳ್ಳುವ ಕಾರಣ ಮುಟ್ಟಿನ ಸಮಯದಲ್ಲಿ ಇದು ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎನ್ನಲಾಗಿದೆ. ಈ ಸಮಯದಲ್ಲಿ ದೇಹದಲ್ಲಿ ವಿಶೇಷ ಶಕ್ತಿ ಇರುವ ಕಾರಣದಿಂದ ಆಯುರ್ವೇದದ ಪ್ರಕಾರ ಮೊದಲ ಮೂರು ದಿನ ಸ್ನಾನ ಏನನ್ನೂ ಮಾಡದೇ ಸಂಪೂರ್ಣವಾಗಿ ರೆಸ್ಟ್ ತೆಗೆದುಕೊಳ್ಳಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಮುಟ್ಟಿನ ದಿನಗಳಲ್ಲಿ ಕೂದಲಿನ ಬುಡ ತುಂಬಾ ಸೂಕ್ಷ್ಮವಾಗಿರುತ್ತವೆ. ಆ ಸಮಯದಲ್ಲಿ ತಲೆಸ್ನಾನ ಮಾಡಿದರೆ ಕೂದಲು ಉದುರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಈ ಸಮಯದಲ್ಲಿ ದೇಹ ಕೂಡ ಸೂಕ್ಷ್ಮವಾಗಿರುವ ಕಾರಣ, ತಲೆಸ್ನಾನದ ನೆಪದಲ್ಲಿ ಬಾತ್ರೂಮ್ನಲ್ಲಿ ಬಹಳ ಹೊತ್ತು ನೀರಿನ ಬಳಿ ನಿಂತರೆ ಶೀತ, ನೆಗಡಿ, ತಲೆನೋವಿನ ಸಮಸ್ಯೆ ಬರುವ ಸಾಧ್ಯತೆ ಇದೆ. ಇನ್ನು ಕೆಲವರು ಶಾಸ್ತ್ರದಲ್ಲಿಯೇ ಹೀಗೆ ಹೇಳಲಾಗಿದೆ ಎನ್ನುವುದೂ ಉಂಟು. ಹಿಂದೂ ಶಾಸ್ತ್ರದ ಪ್ರಕಾರ, ಮುಟ್ಟಾದ ಮೂರು ದಿನಗಳವರೆಗೆ ಮಹಿಳೆಯರು ತಲೆ ಸ್ನಾನ ಮಾಡಬಾರದು.
ಹೀಗಾದಲ್ಲಿ ಮಾತ್ರ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ. ಒಂದು ವೇಳೆ ಅವರು ಈ ನಿಯಮವನ್ನು ಅನುಸರಿಸದಿದ್ದರೆ ಕುಟುಂಬದ ಸದಸ್ಯರೆಲ್ಲರೂ ಅರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಮುಟ್ಟಿನ ಸಮಯದಲ್ಲಿ, ಪೂಜೆ ಇತ್ಯಾದಿ ಚಟುವಟಿಕೆಗಳಿಗೆ ಮಹಿಳೆಯರು ಪಾಲ್ಗೊಳ್ಳಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅದನ್ನು ಅಪವಿತ್ರವೆನ್ನುವ ನಂಬಿಕೆಯಿದೆ. ಮುಟ್ಟಿನ ಅಂತ್ಯದ ನಂತರ ಅಥವಾ ಕನಿಷ್ಠ ಮೂರು ದಿನಗಳ ನಂತರ ಮಾತ್ರ ಕೂದಲನ್ನು ತೊಳೆಯುವುದು ಸೂಕ್ತವಾಗಿದೆ. ಇದರಿಂದ ದೇಹವು ಸಂಪೂರ್ಣವಾಗಿ ಶುದ್ಧವಾಗಿರುತ್ತದೆ.