ವಾಷಿಂಗ್ಟನ್: ಈ ಮೊದಲು ವಲಸಿಗರ ಸ್ವರ್ಗ ಎನಿಸಿದ್ದ ಅಮೆರಿಕ ಈಗ ವಿದೇಶಿಗರಿಗೆ ಸಾಲು ಸಾಲು ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ಹೀಗಾಗಿ ಈಗ ಅಮೆರಿಕ ಎಂದರೆ ಹೊರದೇಶದವರು ಬೆಚ್ಚಿ ಬೀಳುವಂತಾಗಿದೆ.
ಎಚ್1ಬಿ ವೀಸಾ ಮೇಲೆ ನಿರ್ಬಂಧ ಹಾಕಿದ ಅಮೆರಿಕ ಈಗ ಇತರ ವೀಸಾಗಳಲ್ಲೂ ವಿವಿಧ ನಿರ್ಬಂಧಗಳನ್ನು ಹೊರಡಿಸಿದೆ. ಡಯಾಬಿಟಿಸ್, ಬೊಜ್ಜು, ಹೃದಯ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ವಿದೇಶೀ ನಾಗರಿಕರಿಗೆ ವೀಸಾ ನೀಡದಿರಲು ನಿರ್ಧರಿಸಿದೆ.
ಅಮೆರಿಕ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ಈ ಅಂಶ ಇದೆ. ಬೇರೆ ಬೇರೆ ದೇಶಗಳಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳಿಗೆ ಈ ಹೊಸ ಮಾರ್ಗಸೂಚಿಗಳನ್ನು ಕಳುಹಿಸಿಕೊಡಲಾಗಿದೆ. ಅಮೆರಿಕದ ವೀಸಾ ಪಡೆಯಲು ಅಭ್ಯರ್ಥಿಗಳ ಆರೋಗ್ಯ ಪರೀಕ್ಷೆ ನಡೆಸುವುದು ಈ ಮುಂಚಿನಿಂದಲೂ ಇರುವ ನಿಯಮವೇ. ಆದರೆ, ವೀಸಾ ಗೈಡೆನ್ಸ್ನಲ್ಲಿ ಅದನ್ನು ಎಲ್ಲಿಯೂ ನಮೂದಿಸಿರಲಿಲ್ಲ.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದಾಗ ಅದನ್ನು ನಿರ್ಲಕ್ಷಿಸಿ ವೀಸಾ ನೀಡಲಾಗುತ್ತಿತ್ತು. ಆದರೆ ಈಗ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಿರುವುದರಿಂದ ರಾಯಭಾರ ಅಧಿಕಾರಿಗಳು ಅರ್ಜಿದಾರರ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವೀಸಾ ಅರ್ಜಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಮೆರಿಕ ಸರ್ಕಾರ ತನ್ನ ನಿವಾಸಿಗಳ ಆರೋಗ್ಯ ಪಾಲನೆಗೆ ಸಾಕಷ್ಟು ಹಣ ವ್ಯಯಿಸುತ್ತದೆ. ಅಲ್ಲಿ ಇನ್ಷೂರೆನ್ಸ್ ಪ್ಲಾನ್ಗಳಿದ್ದು ಸರ್ಕಾರದಿಂದ ಸಬ್ಸಿಡಿಯೂ ಇದೆ. ಹೀಗಾಗಿ, ಜನರ ಆರೋಗ್ಯ ಸಮಸ್ಯೆ ಹೆಚ್ಚಾದರೆ ಸರ್ಕಾರಕ್ಕೆ ವೆಚ್ಚದ ಹೊರೆ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಅನಾರೋಗ್ಯವಂತ ವಲಸಿಗರನ್ನು ಒಳಗೆ ಸೇರಿಸಿಕೊಳ್ಳದಿರಲು ಅಮೆರಿಕ ನಿರ್ಧರಿಸಿರಬಹುದು.
‘ನೀವು ಅರ್ಜಿದಾರರ ಆರೋಗ್ಯವನ್ನು ಪರಿಗಣಿಸಲೇಬೇಕು. ಹೃದಯ ಕಾಯಿಲೆ, ಶ್ವಾಸಕೋಶ ಕಾಯಿಲೆ, ಕ್ಯಾನ್ಸರ್, ಡಯಾಬಿಟಿಸ್, ನರರೋಗ, ಮಾನಸಿಕ ಆರೋಗ್ಯ ಮೊದಲಾದ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವವರನ್ನು ನೋಡಿಕೊಳ್ಳಲು ಸಾವಿರಾರು ಡಾಲರ್‌ಗಳು ವ್ಯಯವಾಗುತ್ತವೆ. ಬೊಜ್ಜು ಆಸ್ತಮಾ, ಬಿಪಿ ಇತ್ಯಾದಿ ಕಾಯಿಲೆಗೆ ಎಡೆ ಮಾಡಿಕೊಡುತ್ತದಾದ್ದರಿಂದ ಅದನ್ನೂ ಪರಿಶೀಲಿಸಿ’ ಎಂದು ಅಮೆರಿಕದ ಹೊಸ ವೀಸಾ ಮಾರ್ಗಸೂಚಿ ಹೇಳಿದೆ.
ಒಂದು ವೇಳೆ ಅರ್ಜಿದಾರರಿಗೆ ಆರೋಗ್ಯ ಸಮಸ್ಯೆಗಳಿದ್ದು, ಆ ಕಾರಣಕ್ಕೆ ವೀಸಾ ಅರ್ಜಿ ತಿರಸ್ಕೃತಗೊಳ್ಳುವಂತಿದ್ದರೆ, ಅಂಥ ಅರ್ಜಿದಾರರ ಬಳಿ ಹಣ ಬಲ ಇದೆಯಾ ಎನ್ನುವುದನ್ನೂ ಪರಿಗಣಿಸಲಾಗುತ್ತದೆ. ಅಮೆರಿಕದಲ್ಲಿ ಸರ್ಕಾರದ ನೆರವಿಲ್ಲದೆ ಚಿಕಿತ್ಸೆಯನ್ನು ತಾವೇ ಭರಿಸುವಷ್ಟು ಹಣ ಇದ್ದರೆ ಅಂಥವರಿಗೆ ವೀಸಾ ಕೊಡಲು ಅವಕಾಶ ಇರುತ್ತದೆ. ಅಮೆರಿಕದಲ್ಲಿ ಖಾಸಗಿಯಾಗಿ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಹಳ ಖರ್ಚು ಮಾಡಬೇಕಾಗುತ್ತದೆ.

































