ಉತ್ತರಾಖಂಡ : ಯುಪಿಎಸ್ಸಿ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ, ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಹೀಗೆ ತಮ್ಮ ಕಠಿಣ ಪರಿಶ್ರಮ, ಆತ್ಮವಿಶ್ವಾಸದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಫಲರಾದವರಲ್ಲಿ ಐಎಫ್ಎಸ್ ಅಧಿಕಾರಿ ಗೀತಿಕಾ ಅವರು ಕೂಡ ಒಬ್ಬರು.
ಐಎಫ್ಎಸ್ ಅಧಿಕಾರಿ ಗೀತಿಕಾ ಅವರು ಉತ್ತರಾಖಂಡದ ಪಿಥೋರ್ಗಢ್ ಜಿಲ್ಲೆಯವರು. ಅವರು ಉತ್ತರಾಖಂಡದ ನೈನಿತಾಲ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಹರಿಯಾಣದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡಿದರು.
2021ರಲ್ಲಿ ಗೀತಿಕಾ ಅವರು ಯುಪಿಎಸ್ಸಿ ಬರೆಯುವ ನಿರ್ಧಾರ ಮಾಡುತ್ತಾರೆ. ಪರೀಕ್ಷೆಗೆ ತಯಾರಿ ನಡೆಸಲು ಸಾಮಾಜಿಕ ಮಾಧ್ಯಮಗಳಿಂದ ದೂರಸರಿದರು. 2021 ರಲ್ಲಿ ಅವರು ಯುಪಿಎಸ್ಸಿ ಪ್ರಿಲಿಮ್ಸ್ ನಲ್ಲಿ ಉತ್ತೀರ್ಣರಾದರು. ಪ್ರಿಲಿಮ್ಸ್ ಪಾಸ್ ಮಾಡಿದ ನಂತರ, ಅವರು ಮೇನ್ಸ್ ಗೆ ತಯಾರಿ ಪ್ರಾರಂಭಿಸಿದರು. 2022 ರಲ್ಲಿ ಗೀತಿಕಾ ಅವರ ಕುಟುಂಬವು ಡೆಹ್ರಾಡೂನ್ಗೆ ಸ್ಥಳಾಂತರಗೊಂಡಿತು. ಈ ವೇಳೆ ಗೀತಿಕಾ ಅವರು ಮುಖ್ಯ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ತೆರಳಿದರು.
ದೆಹಲಿಯಲ್ಲಿ ಮುಖ್ಯ ಪರೀಕ್ಷೆಯನ್ನು ಬರೆದ ನಂತರ, ಗೀತಿಕಾ ಅವರು ಡೆಹ್ರಾಡೂನ್ಗೆ ಹಿಂತಿರುಗಿದರು ಮತ್ತು ಯುಪಿಎಸ್ಸಿ ಸಂದರ್ಶನಕ್ಕೆ ತಯಾರಿ ಪ್ರಾರಂಭಿಸಿದರು. ಅಂತಿಮ ಸುತ್ತಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಅವರು ಅನೇಕ ಅಣಕು ಸಂದರ್ಶನಗಳಲ್ಲಿ ಭಾಗವಹಿಸಿದರು. 2022ರ ಮೇ 30 ರಂದು ಯುಪಿಸ್ಸಿ ಫಲಿತಾಂಶ ಪ್ರಕಟವಾಯಿತು. ಅವರು 239 ನೇ ಅಖಿಲ ಭಾರತ ರ್ಯಾಂಕ್ ಗಳಿಸಿದ್ದರು. ಈ ಮೂಲಕ ಅವರು ಐಎಫ್ಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.