ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ಆನ್‌ಲೈನ್ ರೈಲು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನುಮುಂದೆ IRCTC ವೆಬ್‌ಸೈಟ್ ಅಥವಾ ಇತರ ಆ್ಯಪ್‌ಗಳ ಮೂಲಕ ಟಿಕೆಟ್ ಬುಕ್ ಮಾಡುವ ಎಲ್ಲಾ ಪ್ರಯಾಣಿಕರು ತಮ್ಮ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಿರುವುದು ಕಡ್ಡಾಯವಾಗಿದೆ. ಆಧಾರ್ ಲಿಂಕ್ ಮಾಡದಿದ್ದರೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಏಜೆಂಟ್‌ಗಳು ಮತ್ತು ಮಧ್ಯವರ್ತಿಗಳ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಈ ಹೊಸ ನಿಯಮಗಳು ರೈಲ್ವೆ ಕೌಂಟರ್‌ಗಳಲ್ಲಿ ಬುಕ್ ಮಾಡುವ ಟಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಜೊತೆಗೆ IRCTC ಬಳಕೆದಾರರಿಗೆ ಟಿಕೆಟ್ ಕಾಯ್ದಿರಿಸುವ ಸಮಯವನ್ನು ವಿಸ್ತರಿಸಲಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ ಆಧಾರ್ ಲಿಂಕ್ ಮಾಡಿರುವ ಬಳಕೆದಾರರು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಟಿಕೆಟ್ ಬುಕ್ ಮಾಡಬಹುದಾಗಿದೆ. ಆಧಾರ್ ಲಿಂಕ್ ಮಾಡದ ಬಳಕೆದಾರರಿಗೆ ಸಂಜೆ 4 ಗಂಟೆಯ ನಂತರ ಮಾತ್ರ ಟಿಕೆಟ್ ಬುಕ್ ಮಾಡುವ ಅವಕಾಶ ದೊರೆಯಲಿದೆ. ಮುಂದಿನ ದಿನಗಳಲ್ಲಿ ಈ ಬುಕ್ಕಿಂಗ್ ಅವಧಿಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದ್ದು, ಅಂತಿಮ ಹಂತದಲ್ಲಿ ಆಧಾರ್ ಲಿಂಕ್ ಮಾಡಿರುವ ಬಳಕೆದಾರರಿಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಟಿಕೆಟ್ ಬುಕ್ ಮಾಡುವ ಅವಕಾಶ ನೀಡಲಾಗುವುದು.
ರೈಲು ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಅವಧಿಯಲ್ಲಿಯೂ ಈಗಾಗಲೇ ಬದಲಾವಣೆ ಮಾಡಲಾಗಿದೆ. ಈ ಹಿಂದೆ ರೈಲು ಹೊರಡುವ 120 ದಿನಗಳ ಮೊದಲು ಟಿಕೆಟ್ ಬುಕ್ ಮಾಡುವ ಅವಕಾಶ ಇದ್ದರೆ, ನವೆಂಬರ್ 2024ರಿಂದ ಈ ಅವಧಿಯನ್ನು 60 ದಿನಗಳಿಗೆ ಇಳಿಸಲಾಗಿದೆ. ಅಂದರೆ ಪ್ರಯಾಣದ ದಿನಾಂಕಕ್ಕಿಂತ ನಿಖರವಾಗಿ 60 ದಿನಗಳ ಮೊದಲು ಮಾತ್ರ ಟಿಕೆಟ್ ಬುಕ್ ಮಾಡಬಹುದು. ಹೊಸ ನಿಯಮದ ಮೂಲಕ ಮೊದಲ ದಿನವೇ ನಿಜವಾದ ಪ್ರಯಾಣಿಕರಿಗೆ ಟಿಕೆಟ್ ಸಿಗುವಂತೆ ನೋಡಿಕೊಳ್ಳುವುದು ರೈಲ್ವೆಯ ಉದ್ದೇಶವಾಗಿದೆ.
IRCTC ಖಾತೆಗೆ ಆಧಾರ್ ಲಿಂಕ್ ಮಾಡಲು ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಲಾಗಿನ್ ಮಾಡಿ ಪ್ರೊಫೈಲ್ ವಿಭಾಗದಲ್ಲಿ Aadhaar KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಟಿಕೆಟ್ ಕೌಂಟರ್‌ಗಳಲ್ಲಿಯೂ ಸಹ OTP ಪರಿಶೀಲನೆ ಕಡ್ಡಾಯವಾಗಿದ್ದು, ಮೊಬೈಲ್ ಸಂಖ್ಯೆ ಆಧಾರ್‌ಗೆ ಲಿಂಕ್ ಆಗಿರುವುದು ಅಗತ್ಯವಾಗಿದೆ.
ಟಿಕೆಟ್ ಬುಕ್ಕಿಂಗ್ ಅಥವಾ OTP ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ ಪ್ರಯಾಣಿಕರು IRCTC ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದು. ರೈಲು ಟಿಕೆಟ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯ ಒದಗಿಸುವ ದಿಸೆಯಲ್ಲಿ ಈ ಕ್ರಮ ಮಹತ್ವದ ಹೆಜ್ಜೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

































