ನವದೆಹಲಿ : ಅಂತರರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿದ ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯ ಪ್ರಕಾರ, ಭಾರತವು 2025-26ರಲ್ಲಿ 6.6% ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ “ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆ”ಗಳಲ್ಲಿ ಪ್ರಮುಖ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಐಎಂಎಫ್ ಪ್ರಕಾರ, ಈ ಬಲವಾದ ಬೆಳವಣಿಗೆಗೆ ಮೊದಲ ತ್ರೈಮಾಸಿಕದ ಆರ್ಥಿಕ ಸಾಧನೆ ಮತ್ತು ಆಂತರಿಕ ಬೇಡಿಕೆಯ ಸ್ಥಿರತೆ ಪ್ರಮುಖ ಕಾರಣವಾಗಿದೆ. ಅಮೆರಿಕದ ಸುಂಕ ಹೆಚ್ಚಳದ ಪರಿಣಾಮಗಳು ಭಾರತದ ಬೆಳವಣಿಗೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂದು ವರದಿ ಸೂಚಿಸಿದೆ.
ಚೀನಾ 2025-26ರಲ್ಲಿ 4.8% ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದ್ದು, ಭಾರತ ಅದಕ್ಕಿಂತ ವೇಗವಾಗಿ ಬೆಳೆಯಲಿದೆ. ಆದರೆ, ಮೊದಲ ತ್ರೈಮಾಸಿಕದ ವೇಗ ನಿಧಾನಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಐಎಮ್‌ಎಫ್ 2026 ರ ಮುನ್ಸೂಚನೆಯನ್ನು 6.2% ಕ್ಕೆ ಇಳಿಸಿದೆ.
ಐಎಮ್‌ಎಫ್ ವರದಿ ಪ್ರಕಾರ, 2025ರಲ್ಲಿ ಜಾಗತಿಕ ಬೆಳವಣಿಗೆ 3.2%, ಮತ್ತು 2026ರಲ್ಲಿ 3.1% ಆಗಲಿದೆ. ಮುಂದುವರಿದ ಆರ್ಥಿಕತೆಗಳು ಸರಾಸರಿ 1.6% ದರದಲ್ಲಿ ಬೆಳೆಯಲಿವೆ, ಆದರೆ ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು ಸರಾಸರಿ 4.2% ಬೆಳವಣಿಗೆ ಕಾಣಲಿವೆ.
ಸ್ಪೇನ್ ಶೇ.2.9ರಷ್ಟು ಬೆಳವಣಿಗೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ಸುಧಾರಿತ ಆರ್ಥಿಕತೆಗಳಲ್ಲಿ ಒಂದು ಆಗಲಿದೆ. ಅಮೆರಿಕಾ (1.9%), ಬ್ರೆಜಿಲ್ (2.4%), ಕೆನಡಾ (1.2%) ಹಾಗೂ ಜಪಾನ್ (1.1%) ಬೆಳವಣಿಗೆಯ ದರವನ್ನು ಸಾಧಿಸುವ ನಿರೀಕ್ಷೆಯಿದೆ.
ಜಾಗತಿಕ ಹಣದುಬ್ಬರವು ಇಳಿಮುಖವಾಗುತ್ತಾ ಹೋಗುತ್ತದೆ ಎಂಬುದನ್ನು ಐಎಮ್‌ಎಫ್ ನಿರೀಕ್ಷಿಸಿದೆ, ಆದರೆ ಅಮೆರಿಕದಲ್ಲಿ ಹಣದುಬ್ಬರ ಇನ್ನೂ ಗುರಿಗಿಂತ ಹೆಚ್ಚು ಇದೆ ಎಂದು ವರದಿ ಎಚ್ಚರಿಸಿದೆ.
ಐಎಮ್‌ಎಫ್ ವರದಿಯ ಅಕ್ಟೋಬರ್ ಪರಿಷ್ಕರಣೆ ಪ್ರಕಾರ, FY26ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ 7.8% ದರದಲ್ಲಿ ಬೆಳೆದಿತ್ತು. 2024-25ರಲ್ಲಿ ಭಾರತ 6.5% ವಾಸ್ತವಿಕ ಬೆಳವಣಿಗೆ ದಾಖಲಿಸಿತ್ತು. ಸರ್ಕಾರವು 2025-26ರ GDP ಮುನ್ಸೂಚನೆಯನ್ನು 6.3–6.8% ನಡುವೆ ಕಾಯ್ದುಕೊಂಡಿದ್ದು, ದೇಶೀಯ ಆರ್ಥಿಕ ಚಟುವಟಿಕೆಗಳ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ.
































