ರಾಜಸ್ತಾನ :ತಾಳ್ಮೆ ಹಾಗೂ ಕಠಿಣ ಪರಿಶ್ರಮ, ಓದಿನಲ್ಲಿ ಆಸಕ್ತಿ ಹಿಡಿದಿಟ್ಟುಕೊಂಡವರು ಇನ್ನೇನೆಲ್ಲಾ ಸಾಧಿಸಬಹುದು ಎಂಬುದಕ್ಕೆ ರಾಜಸ್ತಾನ ಮೂಲದ ಪ್ರೇಮ್ ಸುಖ್ ದೇಲು ಎಂಬುವರ ಸ್ಫೂರ್ತಿದಾಯಕ ಸ್ಟೋರಿ.
ಐಪಿಎಸ್ ಅಧಿಕಾರಿಯೊಬ್ಬರು ಮೊದಲು ಪಡೆದಿದ್ದು ದ್ವಿತೀಯ ಪಿಯುಸಿ ಆಧಾರಿತ ವಿಲೇಜ್ ಅಕೌಂಟಂಟ್ (ಪಥ್ವಾರಿ) ಹುದ್ದೆ. ಕೊನೆಗೆ ಅವರು ತಮ್ಮ ಗುರಿ ಮುಟ್ಟಿದ್ದು ಐಪಿಎಸ್ ಆಗುವವರೆಗೆ. 6 ವರ್ಷದಲ್ಲಿ ಒಟ್ಟು 12 ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿದ್ದರು ಪ್ರೇಮ್ ಸುಖ್ ದೇಲು. ಅವರು ರಾಜಸ್ತಾನ ರಾಜ್ಯದ ಬಿಕನೆರ್ ಮೂಲದವರು. ಒಂದು ರೈತ ಕುಟುಂಬದಲ್ಲಿ ಜನಿಸಿದರು. ಮೊದಲಿಗೆ ತಮ್ಮ ಕಠಿಣ ಶ್ರಮ ದಿಂದ ಪಥ್ವಾರಿ ಆದರು. ಪಥ್ವಾರಿ ಎಂದರೆ ಗ್ರಾಮ ಲೆಕ್ಕಿಗ ಹುದ್ದೆ. ಅವರು ಆ ಹುದ್ದೆಗೆ ತೃಪ್ತಿಪಟ್ಟುಕೊಂಡವರಲ್ಲ. ಅವರ ಕನಸು ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವುದಾಗಿತ್ತು. ಹಾಗೂ ಐಪಿಎಸ್ ಆಗುವುದಾಗಿತ್ತು.
ಪ್ರೇಮ್ ಸುಖ್ ತಂದೆ ಒಬ್ಬ ರೈತರು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಆದ್ದರಿಂದ ಅವರ ತಂದೆ ವ್ಯವಸಾಯದ ಜತೆಗೆ ಒಂಟೆ ಕಾರ್ಟ್ ಅನ್ನು ನಡೆಸುತ್ತಿದ್ದರು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಂಟೆ ಮೇಲೆ ಜನರನ್ನು ಸಾಗುತ್ತಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ಪ್ರೇಮ್ ಆರ್ಥಿಕ ಪರಿಸ್ಥಿತಿ ಇಂದ ತಮ್ಮ ಕುಟುಂಬವನ್ನು ಮೇಲೆತ್ತುವ ಜತೆಗೆ ಸಾಧನೆ ಮಾಡುವ ಕನಸು ಕಟ್ಟಿಕೊಂಡರು.
ಪ್ರೇಮ್ ಸುಖ್ ದೇಲು 10ನೇ ತರಗತಿವರೆಗೂ ಸಹ ಸರ್ಕಾರಿ ಶಾಲೆಯಲ್ಲಿಯೇ ತಮ್ಮ ಸ್ವಂತ ಗ್ರಾಮದಲ್ಲಿ ಓದಿದವರು. ನಂತರದಲ್ಲಿ ಬಿಕನೆರ್‌ನ ಸರ್ಕಾರಿ ದುಂಗರ್ ಕಾಲೇಜಿನಲ್ಲಿ ಓದಿದರು. ಸ್ನಾತಕೋತ್ತರ ಪದವಿ (ಎಂಎ) ಅನ್ನು ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಗೋಲ್ಡ್ ಮೆಡಲ್ ಸಹ ಪಡೆದಿದ್ದರು. ಎಂಎ ಮುಗಿಸಿದ ವರ್ಷದಲ್ಲೇ ಯುಜಿಸಿ ಎನ್‌ಇಟಿ ಪಾಸ್ ಜತೆಗೆ ಜೆಆರ್‌ಎಫ್ ಅರ್ಹತೆ ಪಡೆದಿದ್ದರು.
ಪ್ರೇಮ್ ಸುಖ್ ಹಿರಿಯ ಅಣ್ಣ ರಾಜಸ್ತಾನದಲ್ಲಿ ಕಾನ್ಸ್‌ಟೇಬಲ್ ಆಗಿದ್ದರು. ಇವರಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಸ್ಫೂರ್ತಿಗೊಂಡಿದ್ದ ಪ್ರೇಮ್ ರವರು, 2010 ರಲ್ಲಿ ಪದವಿ ಮುಗಿಸುತ್ತಿದ್ದಂತೆ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆ ಹುದ್ದೆ ಗಿಟ್ಟಿಸಿದ್ದರು ಸಹ. ನಂತರ ತಮ್ಮ ಸಾಮರ್ಥ್ಯ ಅರಿತ ಅವರು ಗ್ರಾಮ ಲೆಕ್ಕಿಗ ಹುದ್ದೆ ಕರ್ತವ್ಯ ನಿರ್ವಹಿಸುತ್ತಲೇ ಮಾಸ್ಟರ್ ಡಿಗ್ರಿ ಪಾಸ್ ಮಾಡಿದ್ದು, ಎನ್‌ಇಟಿ ಪಾಸ್ ಮಾಡಿದ್ದು.
ಪಥ್ವಾರಿ ಆದ ನಂತರದಲ್ಲಿ, ಪ್ರೇಮ್ ಸುಖ್ ರಾಜಸ್ತಾನ ಗ್ರಾಮ ಸೇವಕ್ ಪರೀಕ್ಷೆ ಬರೆದು ಎರಡನೇ ರ್‍ಯಾಂಕ್ ಪಡೆದರು ನಂತರ ಅಸಿಸ್ಟಂಟ್ ಜೈಲರ್ ಪರೀಕ್ಷೆಯನ್ನು ಪಾಸ್ ಮಾಡಿದರು. ಈ ಹುದ್ದೆಗೆ ನಿಯೋಜನೆಗೊಳ್ಳುವ ಮುಂಚಿತವಾಗಿಯೇ ರಾಜಸ್ತಾನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಪರೀಕ್ಷೆ ಫಲಿತಾಂಶ ಪ್ರಕಟಗೊಂಡು, ಅದರಲ್ಲೂ ಇವರು ಆಯ್ಕೆಯಾಗಿದ್ದರು. ಇವುಗಳಲ್ಲದೇ ಎನ್‌ಇಟಿ, ಬಿ.ಇಡಿ ಪರೀಕ್ಷೆ ಪಾಸ್ ಮಾಡಿದ್ದು ಮಾತ್ರವಲ್ಲದೇ ಉಪನ್ಯಾಸಕ ಹುದ್ದೆಗೆ ಆಯ್ಕೆ ಆಗಿದ್ದರು. ನಂತರದಲ್ಲಿ ಭಾರತ ನಾಗರೀಕ ಸೇವೆಗಳ ಪರೀಕ್ಷೆಗೆ ಓದಲು ಆರಂಭಿಸಿದರು.
ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಲೇ ಯುಪಿಎಸ್‌ಸಿ’ಗೆ ಓದುತ್ತಿದ್ದ ಪ್ರೇಮ್, ರಾಜಸ್ತಾನ ಪಬ್ಲಿಕ್ ಸರ್ವೀಸ್ ಕಮಿಷನ್ ಪರೀಕ್ಷೆ ಪಾಸ್ ಮಾಡಿ ತಾಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು. ಆದರೂ ಸಹ ಯುಪಿಎಸ್‌ಸಿ’ಗೆ ಓದುವುದನ್ನು ನಿಲ್ಲಿಸಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ 170 Rank ನೊಂದಿಗೆ ಐಪಿಎಸ್ ಅಧಿಕಾರಿ ಆದರು. ಗುಜರಾತ್ ಕೇಡರ್ ಅನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಅಮ್‌ರೇಲಿ ಅಲ್ಲಿ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಆಗಿ ಅಧಿಕಾರ ವಹಿಸಿಕೊಂಡರು.