ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ನಿಯ ಕಾಟಕ್ಕೆ ಮನನೊಂದು ಟೆಕ್ಕಿ ಅತುಲ್ ಸುಭಾಷ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಬೆಂಗಳೂರಲ್ಲಿ ನಡೆದಿದೆ.
ಪತ್ನಿ ಹಾಗೂ ಮಾವನ ಕಾಟಕ್ಕೆ ಬೇಸತ್ತು ಹೆಡ್ ಕಾನ್ಸ್ಟೇಬಲ್ ಒಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರೈಲಿಗೆ ತಲೆಕೊಟ್ಟು ತಿಪ್ಪಣ್ಣ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ತಿಪ್ಪಣ್ಣ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಹಾಗೂ ಮಾವನ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ತಿಪ್ಪಣ್ಣ ಅವರು ಮದುವೆಯಾಗಿದ್ದರು. ಒಂದು ವರ್ಷದವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಒಂದು ವರ್ಷದ ಬಳಿಕ ಸಂಸಾರದಲ್ಲಿ ವೈಮನಸ್ಸು, ಕಲಹ ಉಂಟಾಗಿದೆ. ಅಲ್ಲದೆ ಪತ್ನಿಯ ಅಪ್ಪ ಅಂದರೆ ಮಾವ ಯಮನಪ್ಪ ಎನ್ನುವವರು ಕೂಡ ಮಾನಸಿಕವಾಗಿ ಹಿಂಸೆ ನೀಡಿದ್ದು, ಅಶ್ಲೀಲವಾಗಿ ಬೈದು ಕಿರುಕುಳ ನೀಡಿದ್ದಾರೆ. ಮಾವ ಯಮನಪ್ಪ ಜೀವ ಬೆದರಿಕೆ ಹಾಕಿರುವ ಬಗ್ಗೆ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

































