ಚಿತ್ರದುರ್ಗ : ಈ ಹಿಂದೆ ಆದ ತಪ್ಪು ಮತ್ತೆ ಮರುಕಳಿಸಬಾರದು. ಸಮೀಕ್ಷೆಗೆ ಮನೆ ಬಾಗಿಲಿಗೆ ಬಂದಾಗ ಛಲವಾದಿ ಎಂದು ಬರೆಸಿ. ಧರ್ಮ ಕಾಲಂನಲ್ಲಿ ಭೌದ್ದ ಧರ್ಮ ಎಂದು ಬರೆಸಬೇಕುಎಂದು ಛಲವಾದಿ ಗುರುಪೀಠದ ಬಸವನಾಗಿದೇವ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎನ್ನುವ ಪದ ಜಾತಿಗಳಲ್ಲ. ಎಂಟನೆ ಕಾಲಂನಲ್ಲಿ ಭೌದ್ದ ಧರ್ಮ ಎಂದೆ ಬರೆಸುವಂತೆ ಬಲಗೈ ಜಾತಿಗಳ ಒಕ್ಕೂಟ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ತೀರ್ಮಾನಿಸಿದೆ. ಅದರಂತೆ ಛಲವಾದಿ ಜನಾಂಗ ಸಮೀಕ್ಷೆಯಲ್ಲಿ ನಿಖರವಾದ ಮಾಹಿತಿ ನೀಡುವಂತೆ ಜಾಗೃತಿಗೊಳಿಸಿದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ ಹಿಂದಿನ ಸಮೀಕ್ಷೆಯಲ್ಲಿ ತಪ್ಪಾಗಿರುವುದರಿಂದ ಛಲವಾದಿಗಳಲ್ಲಿ ಕೆಲವರನ್ನು ಬೇರೆ ಜಾತಿಗಳಿಗೆ ಸೇರಿಸಲಾಗಿದೆ. ನಾವುಗಳು ಮತ್ತೊಬ್ಬರ ಊಟ ಕಸಿಯುವವರಲ್ಲ. ಸಮೀಕ್ಷೆಯಲ್ಲಿ ಛಲವಾದಿ ಎಂದು ನಮೂದಿಸಿ ಧರ್ಮದ ವಿಚಾರ ಬಂದಾಗ ಬೌದ್ದ ಧರ್ಮ ಎಂದೆ ಬರೆಸಬೇಕು. ತುಳಿತಕ್ಕೊಳಪಟ್ಟು ಈಗಲೂ ಅಸ್ಪøಶ್ಯರಾಗಿಯೇ ಉಳಿದಿದ್ದೇವೆ. ಎಲ್ಲಾ ಜನಾಂಗದಲ್ಲಿಯೂ ಬಡವರಿದ್ದಾರೆ. ಜಾತಿಗಳನ್ನು ಒಡೆಯುವುದು ಕಾಂಗ್ರೆಸ್ ಉದ್ದೇಶವಲ್ಲ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕನಸು ನನಸಾಗಬೇಕೆಂಬ ಆಶಯವಿಟ್ಟುಕೊಂಡಿದೆ ಎಂದರು.
ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ರುದ್ರಮುನಿ ಮಾತನಾಡುತ್ತ ಒಳ ಮೀಸಲಾತಿಯಲ್ಲಿ ಶೇ.6 ರಷ್ಟು ಮೀಸಲಾತಿ ನಮಗೆ ಸಿಕ್ಕಿರುವುದನ್ನು ಸ್ವಾಗತಿಸುತ್ತೇವೆ. ಜನಸಂಖ್ಯೆಯಲ್ಲಿ ಛಲವಾದಿಗಳು ಜಾಸ್ತಿಯಿದ್ದರೂ ಹಿಂದಿನ ಸಮೀಕ್ಷೆಯಲ್ಲಿ ಕಡಿಮೆ ತೋರಿಸಿ ಅನ್ಯಾಯವೆಸಗಲಾಗಿದೆ
ಪ್ರವರ್ಗ ಬಿ.ಯಲ್ಲಿಟ್ಟಿದ್ದರೆ ಅದನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಸಮೀಕ್ಷೆಗೆ ತೆಲಂಗಾಣ 90 ದಿನಗಳನ್ನು ತೆಗೆದುಕೊಂಡಿದೆ. ಅದೇ ನಮ್ಮ ರಾಜ್ಯ ಸರ್ಕಾರ ಹದಿನೈದು ದಿನಗಳನ್ನು ನಿಗಧಿಪಡಿಸಿರುವುದರಿಂದ ಸಮೀಕ್ಷೆ ಯಶಸ್ವಿಯಾಗುವುದಿಲ್ಲ. ಹಾಗಾಗಿ ಇನ್ನು ಕೆಲವು ದಿನಗಳ ವಿಸ್ತರಣೆಯಾಗಬೇಕೆಂದು ಮನವಿ ಮಾಡಿದರು.
ಛಲವಾದಿ ಸಮಾಜದ ಮುಖಂಡರುಗಳಾದ ಹೆಚ್.ಅಣ್ಣಪ್ಪಸ್ವಾಮಿ, ವೈ.ತಿಪ್ಪೇಸ್ವಾಮಿ, ಹಾಲೇಶಪ್ಪ, ನರಸಿಂಹಮೂರ್ತಿ, ಛಲವಾದಿ ತಿಪ್ಪೇಸ್ವಾಮಿ, ಭೂತೇಶ್, ಮೂಡಲಗಿರಿಯಪ್ಪ ಇನ್ನು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.