ಕೌಲಾಲಂಪುರ: 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶುಕ್ರವಾರ ಸಹಿ ಹಾಕಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದನ್ನು ಎರಡೂ ರಾಷ್ಟ್ರಗಳ ನಡುವಿನ ಬೆಳೆಯುತ್ತಿರುವ ಕಾರ್ಯತಂತ್ರದ “ಸಂಕೇತ” ಎಂದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅವರ ಅಮೇರಿಕನ್ ರಕ್ಷಣಾ ಸಚಿವ ಪೀಟರ್ ಹೆಗ್ಸೆತ್ ನಡುವೆ ಕೌಲಾಲಂಪುರದಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
“ನಾವು 10 ವರ್ಷಗಳ ‘ಯುಎಸ್-ಭಾರತ ಪ್ರಮುಖ ರಕ್ಷಣಾ ಪಾಲುದಾರಿಕೆಗಾಗಿ ಚೌಕಟ್ಟಿ’ಗೆ ಸಹಿ ಹಾಕಿದ್ದೇವೆ. ಇದು ಈಗಾಗಲೇ ಬಲವಾದ ನಮ್ಮ ರಕ್ಷಣಾ ಪಾಲುದಾರಿಕೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ” ಎಂದು ರಾಜನಾಥ್ ಸಿಂಗ್ ಹೆಗ್ಸೆತ್ ಅವರೊಂದಿಗಿನ ಮಾತುಕತೆಯ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ಒಪ್ಪಂದ ಭಾರತ-ಯುಎಸ್ ರಕ್ಷಣಾ ಸಂಬಂಧಕ್ಕೆ ನೀತಿ ನಿರ್ದೇಶನವನ್ನು ಒದಗಿಸುತ್ತದೆ. ಇದು ನಮ್ಮ ಬೆಳೆಯುತ್ತಿರುವ ಕಾರ್ಯತಂತ್ರದ ಸಂಕೇತವಾಗಿದೆ ಮತ್ತು ಪಾಲುದಾರಿಕೆಯ ಹೊಸ ದಶಕದ ಆರಂಭವನ್ನು ಸೂಚಿಸುತ್ತದೆ” ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
“ರಕ್ಷಣೆ ನಮ್ಮ ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರಸ್ತಂಭವಾಗಿ ಉಳಿಯುತ್ತದೆ. ಮುಕ್ತ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಾಲುದಾರಿಕೆ ನಿರ್ಣಾಯಕವಾಗಿದೆ” ಎಂದಿದ್ದಾರೆ.
ಇನ್ನು “ಈ ಒಪ್ಪಂದ ನಮ್ಮ ರಕ್ಷಣಾ ಪಾಲುದಾರಿಕೆಯನ್ನು ಮುನ್ನಡೆಸುತ್ತದೆ, ಇದು ಪ್ರಾದೇಶಿಕ ಸ್ಥಿರತೆ ಮತ್ತು ತಡೆಗಟ್ಟುವಿಕೆಗೆ ಒಂದು ಮೂಲಾಧಾರವಾಗಿದೆ. ನಾವು ನಮ್ಮ ಸಮನ್ವಯ, ಮಾಹಿತಿ ಹಂಚಿಕೆ ಮತ್ತು ತಾಂತ್ರಿಕ ಸಹಕಾರವನ್ನು ಹೆಚ್ಚಿಸುತ್ತಿದ್ದೇವೆ. ನಮ್ಮ ರಕ್ಷಣಾ ಸಂಬಂಧಗಳು ಹಿಂದೆಂದಿಗಿಂತಲೂ ಬಲವಾಗಿರಲಿಲ್ಲ” ಎಂದು ಅಮೆರಿಕ ರಕ್ಷಣಾ ಸಚಿವ ಹೆಗ್ಸೇತ್ ಹೇಳಿದ್ದಾರೆ.
 
				 
         
         
         
															 
                     
                     
                    

































 
    
    
        