ನವದೆಹಲಿ: ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರನ್ನು ಧರ್ಮ ಕೇಳಿ ಗುಂಡಿಕ್ಕಿ ಕೊಂದ ಬಳಿಕ ಪಾಕಿಸ್ಥಾನದ ವಿರುದ್ಧ ಪ್ರತೀಕಾರ ತೀರಿಸಲು ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಒಂದೊಂದೇ ಮಾಹಿತಿ ಈಗ ಬಹಿರಂಗವಾಗುತ್ತಿದೆ. ಭಾರತದ ವಾಯುಪಡೆಗೆ ಪಾಕಿಸ್ಥಾನದ ಒಂಭತ್ತು ಉಗ್ರನೆಲೆಗಳ ಮೇಲೆ ದಾಳಿ ನಡೆಸಲು ಬರೀ 23 ನಿಮಿಷ ಬೇಕಾಗಿತ್ತು. ಈ 23 ನಿಮಿಷ ಪಾಕಿಸ್ಥಾನಕ್ಕೆ ಚೀನ ಕೊಟ್ಟಿದ್ದ ಏರ್ ಡಿಫೆನ್ಸ್ ಸಿಸ್ಟಮನ್ನೇ ಭಾರತ ನಿಷ್ಕ್ರಿಯಗೊಳಿಸಿತ್ತು.
ತನ್ನ ಆಪ್ತ ದೇಶವಾದ ಪಾಕಿಸ್ಥಾನಕ್ಕೆ ಚೀನ HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ನೀಡಿತ್ತು. ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಬೇಧಿಸಿ ಭಾರತದ ಕ್ಷಿಪಣಿಗಳು ನಿಗದಿತ ಗುರಿಯನ್ನು ತಲುಪಬೇಕಿತ್ತು. ಸುಮಾರು 300 ಕಿ.ಮೀ ದೂರದಿಂದಲೇ ಬರುತ್ತಿರುವ ಕ್ಷಿಪಣಿ, ಡ್ರೋನ್, ಯುದ್ಧ ವಿಮಾನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ HQ-9 ಹೊಂದಿತ್ತು.
ಪಾಕಿಸ್ಥಾನ ಲಾಹೋರ್ ಮತ್ತು ಇತರ ಸ್ಥಳಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಿತ್ತು. ಹೀಗಾಗಿ ದಾಳಿ ನಡೆಸುವ ಮೊದಲು ವಾಯುಸೇನೆ ಮಾಡಿದ ಕೆಲಸ ಏನೆಂದರೆ ಬಹುಕೋಟಿ ವೆಚ್ಚದ ವಾಯು ರಕ್ಷಣಾ ವ್ಯವಸ್ಥೆಯನ್ನು ಬೈಪಾಸ್ ಮಾಡಿ ಜಾಮ್ ಮಾಡಿತ್ತು. ವಾಯು ರಕ್ಷಣಾ ವ್ಯವಸ್ಥೆಯನ್ನು ಜಾಮ್ ಮಾಡಿದ ನಂತರ ಪಾಕಿಸ್ಥಾನದ ಒಳಗಡೆ ಪ್ರವೇಶ ಮಾಡದೆ ಭಾರತದ ಒಳಗಡೆದಿಂದಲೇ ದಾಳಿ ನಡೆಸಿತು. ರಫೇಲ್ ಯುದ್ಧ ವಿಮಾನದ ಮೂಲಕ ಪಾಕ್ನಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದರೆ, ಪಾಕ್ ಆಕ್ರಮಿತ ಕಾಶ್ಮೀರದ ಒಳಗಡೆ ಇರುವ ಉಗ್ರರ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿ ಧ್ವಂಸ ಮಾಡಿತು.
ಮೇ 7ರಂದು ಮಧ್ಯರಾತ್ರಿ ಬಳಿಕ ಭಾರತದ ವಾಯುಪಡೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ಥಾನದ 9 ಉಗ್ರರ ನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಕ್ಷಿಪಣಿ ಮತ್ತು ಡ್ರೋನ್ಗಳ ಮಳೆಗರೆದು ಎಲ್ಲ ಸ್ಥಾಪನೆಗಳನ್ನು ನಾಶ ಮಾಡಿ 100ಕ್ಕೂ ಅಧಿಕ ಉಗ್ರರನ್ನು ಸಂಹರಿಸಿದೆ.
ಇದಕ್ಕೆ ಪ್ರತಿಯಾಗಿ ಮರುದಿನ ಪಾಕಿಸ್ಥಾನ ಭಾರತದ ಸೇನಾನೆಲೆಗಳ ಮೇಲೆ ನೂರಾರು ಡ್ರೋನ್ಗಳ ಮೂಲಕ ದಾಳಿ ಮಾಡಲು ಯತ್ನಿಸಿದ್ದರೂ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಬಹುತೇಕ ಡ್ರೋನ್ಗಳನ್ನು ಗುರಿ ತಲುಪುವ ಮೊದಲೇ ಹೊಡೆದುರುಳಿಸಿತ್ತು. ಆದರೆ ಪಾಕಿಸ್ಥಾನದ ಚೀನ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಮ್ಗೆ ಭಾರತದ ಒಂದೇ ಒಂದು ಡ್ರೋನ್ ಅಥವಾ ಕ್ಷಿಪಣಿಯನ್ನು ತಡೆಯಲು ಸಾಧ್ಯವಾಗಿಲ್ಲ.
ನಂತರ ಶುರುವಾದ ಪೂರ್ಣ ಪ್ರಮಾಣದ ಯುದ್ಧದಲ್ಲೂ ಪಾಕಿಸ್ಥಾನದ ಹಲವು ಸೇನಾ ನೆಲೆಗಳನ್ನು ಭಾರತ ಯಶಸ್ವಿಯಾಗಿ ಧ್ವಂಸ ಮಾಡಿದೆ. ಆಗ ಕೂಡ ಚೀನದ ಏರ್ ಡಿಫೆನ್ಸ್ ಸಿಸ್ಟಮ್ಗೆ ಭಾರತದ ದಾಳಿಯನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಈ ಯುದ್ಧದಲ್ಲಿ ಪಾಕಿಸ್ಥಾನದ ಬಡಾಯಿಗಳೆಲ್ಲ ಬೆತ್ತಲಾಗಿವೆ. ಚೀನದ ಶಸ್ತಾಸ್ತ್ರಗಳ ಸಾಮರ್ಥ್ಯವೂ ಜಗಜ್ಜಾಹೀರಾಗಿದೆ. ಪಾಕಿಸ್ಥಾನಕ್ಕೆ ತನ್ನ ಅಣ್ವಸ್ತ್ರ ನೆಲೆಯನ್ನೂ ರಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇಡೀ ಯುದ್ಧಕ್ಕೆ ಪಾಕಿಸ್ಥಾನ ಬಳಸಿದ್ದು ಚೀನ ಮತ್ತು ಟರ್ಕಿಯಿಂದ ಖರೀದಿಸಿದ್ದ ಅಸ್ತ್ರಗಳನ್ನು. ಟರ್ಕಿಯ ಅತ್ಯಂತ ಬಲಿಷ್ಠ ಎನ್ನಲಾಗುತ್ತಿರುವ ಡ್ರೋನ್ಗಳನ್ನು ಕೂಡ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಯಶಸ್ವಿಯಾಗಿ ತಡೆದು ಹೊಡೆದುರುಳಿಸಿದೆ. ಭಾರತ ತನಗೆ ಯಾವುದೇ ಹಾನಿಯಾಗದಂತೆ ಶತ್ರು ದೇಶವನ್ನು ಹಿಮ್ಮೆಟ್ಟಿಸಿರುವುದು ನಮ್ಮ ಸಶಸ್ತ್ರ ಪಡೆಯ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಪಾಕ್ನಿಂದ ಬರುತ್ತಿದ್ದ ಡ್ರೋನ್ ಮತ್ತು ಕ್ಷಿಪಣಿಗಳನ್ನು ತೊಡೆದು ಹಾಕಲು ಬರಾಕ್ -8 ಕ್ಷಿಪಣಿ ವ್ಯವಸ್ಥೆ, ಎಸ್ -400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಗಳು, ಆಕಾಶ್ ಕ್ಷಿಪಣಿ ವ್ಯವಸ್ಥೆ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ವಿರೋಧಿ ಉಪಕರಣಗಳನ್ನು ನಿಯೋಜಿಸಲಾಗಿತ್ತು. ಇದರಿಂದಾಗಿ ಮೇ 7 ರ ರಾತ್ರಿ 15 ಭಾರತೀಯ ನಗರಗಳ ಮೇಲೆ ದಾಳಿಗೆ ಮುಂದಾಗಿದ್ದ ಪಾಕ್ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಲಾಯಿತು ಎಂದು ಹೇಳಿದೆ.