ನವದೆಹಲಿ : ಭಾರತ ಸರ್ಕಾರವು ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಿದೆ. ಭಾರತ-ಬಾಂಗ್ಲಾದೇಶ ಗಡಿಯಾದ್ಯಂತ ಎಲ್ಲಾ ಭೂಮಾರ್ಗಗಳ ಮೂಲಕ ಆಮದು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಬಾಂಗ್ಲಾದೇಶದಿಂದ ಆಮದಾಗುವ ಎಲ್ಲಾ ಸರಕುಗಳು ಕೇವಲ ಮಹಾರಾಷ್ಟ್ರದ ಜವಾಹರಲಾಲ್ ನೆಹರು ಬಂದರು (ನ್ಹಾವಾ ಶೇವಾ) ಮೂಲಕವೇ ಭಾರತಕ್ಕೆ ಪ್ರವೇಶಿಸಲು ಅನುಮತಿ ಇರಲಿದೆ ಎಂದು. ಈ ಕ್ರಮವು ಗಡಿ ವ್ಯಾಪಾರದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಜವಾಹರಲಾಲ್ ನೆಹರು ಬಂದರಿನಲ್ಲಿ ಕಟ್ಟುನಿಟ್ಟಾದ ತಪಾಸಣೆ ಮತ್ತು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಜಾರಿಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಬಾಂಗ್ಲಾದೇಶದಿಂದ ಆಮದಾಗುವ ಜವಳಿ, ಕೃಷಿ ಉತ್ಪನ್ನಗಳು ಮತ್ತು ಇತರ ಅಗತ್ಯವಸ್ತುಗಳು ಈಗ ಒಂದೇ ಬಂದರಿನ ಮೂಲಕ ಬರಬೇಕಾಗಿರುವುದರಿಂದ, ವ್ಯಾಪಾರಿಗಳಿಗೆ ಲಾಜಿಸ್ಟಿಕ್ಸ್ ವೆಚ್ಚ ಹೆಚ್ಚಾಗಬಹುದು. ಈ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಸರ್ಕಾರವು ಇನ್ನೂ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಗಡಿ ಭದ್ರತೆ, ಕಳ್ಳಸಾಗಾಣಿಕೆ ನಿಯಂತ್ರಣ ಮತ್ತು ಆರ್ಥಿಕ ನೀತಿಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಇನ್ನು ನಿರ್ಬಂಧದಿಂದಾಗಿ ಗಡಿಪ್ರದೇಶದ ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸದ್ಯ ಚರ್ಚೆಗಳು ಶುರುವಾಗಿದೆ. ಸರ್ಕಾರವು ಈ ನಿರ್ಬಂಧದಿಂದ ಉಂಟಾಗಬಹುದಾದ ಸವಾಲುಗಳನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.