ನವದೆಹಲಿ: ಚೀನಾ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಮೆಗಾ ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದು, ಈ ಸಂಬಂಧ ಭಾರತ ಮೌನ ಮುರಿದಿದೆ.
ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದು, ಅಣೆಕಟ್ಟು ನಿರ್ಮಾಣ ವಿಷಯದಲ್ಲಿ ಕೆಳಭಾಗದಲ್ಲಿ ಬರುವ ದೇಶಗಳ ಹಿತಾಸಕ್ತಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಚೀನಾಗೆ ಸೂಚಿಸಿದೆ. ಹಾಗೆಯೇ ನಮ್ಮ ಹಿತಾಸಕ್ತಿಯ ರಕ್ಷಣೆಯ ಹಿನ್ನೆಲೆ ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಚೀನಾದ ಈ ಬೃಹತ್ ಅಣೆಕಟ್ಟಿನಿಂದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಭಾಗಗಳಿಗೆ ಪ್ರತಿಕೂಲ ಪರಿಸ್ಥಿತಿ ತಲೆದೋರುವ ಸಾಧ್ಯತೆ ಇದೆ. ಹಾಗೆಯೇ ನದಿಯ ನೀರನ್ನು ಬಳಕೆ ಮಾಡುವ ಕಾನೂನುಬದ್ಧ ಹಕ್ಕು ಹೊಂದಿರುವ ರಾಷ್ಟ್ರಗಳು ಚೀನಾ ನಿರ್ಮಿಸುತ್ತಿರುವ ಅಣೆಕಟ್ಟಿನ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಲೇ ಬಂದಿವೆ. ಈ ಕಾಮಗಾರಿ ಹಿನ್ನೆಲೆಯಲ್ಲಿ ಚೀನಾವು ಬ್ರಹ್ಮಪುತ್ರ ನದಿಯ ಕೆಳ ಭಾಗದ ರಾಷ್ಟ್ರಗಳ ಜೊತೆಗೆ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.