ನವದೆಹಲಿ : ರೈತರು ಮತ್ತು ಮೀನುಗಾರರಿಗೆ ಸಮಸ್ಯೆಯಾಗುವ ಯಾವುದೇ ಹಿತಾಸಕ್ತಿಯ ಜೊತೆ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳದಲ್ಲಿ ಮಾತನಾಡಿದ ಅವರು, “ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಭಾರತ ತನ್ನ ರೈತರು, ಜಾನುವಾರು ಮಾಲೀಕರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದರು.
“ಸರ್ಕಾರದ ನಿರ್ಧಾರದಿಂದ ಭಾರೀ ಬೆಲೆ ತೆರಬೇಕಾಗುತ್ತದೆ ಎನ್ನುವುದು ನನಗೆ ತಿಳಿದಿದೆ. ಇದಕ್ಕೆ ನಾನು ಸಿದ್ಧನಿದ್ದೇನೆ. ದೇಶದ ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರ ಹಿತದೃಷ್ಟಿಯಿಂದ ಭಾರತ ಎಲ್ಲದ್ದಕ್ಕೂ ಸಿದ್ಧವಾಗಿದೆ” ಎಂದು ಹೇಳಿದರು.
ಜುಲೈ 20 ರಂದು ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ 25% ಸುಂಕವನ್ನು ವಿಧಿಸಿತ್ತು. ಇದೀಗ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಮತ್ತೆ 25% ಸುಂಕವನ್ನು ಟ್ರಂಪ್ ವಿಧಿಸಿದ್ದಾರೆ.