ನವದೆಹಲಿ : ಭಾರತೀಯರ ಭಾರಿ ವಿರೋಧದ ನಡುವೆ ಭಾರತ-ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಇಂದು ದುಬೈಯಲ್ಲಿ ಮುಖಾಮುಖಿಯಾಗಲಿವೆ.2025ರ ಏಷ್ಯಾಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು ಎದುರಿಸಲಿದೆ. ಗ್ರೂಪ್ ಎ ನಲ್ಲಿರುವ ಈ ಎರಡೂ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದೆ. ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿ 9 ವಿಕೆಟ್‌ಗಳಿಂದ ಗೆದ್ದಿದೆ. ಇತ್ತ ಒಮಾನ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದ ಪಾಕಿಸ್ತಾನ ಭಾರಿ ಅಂತರದ ಗೆಲುವು ಸಾಧಿಸಿತ್ತು. ಈಗ ಈ ಗುಂಪಿನ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಿವೆ.
ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಟಿ20 ಪಂದ್ಯ ನಡೆಯುತ್ತಿದೆ. ಇದಕ್ಕೂ ಮೊದಲು 2024ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಇದಾದ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಭಾರತ ಗೆಲುವು ಸಾಧಿಸಿತ್ತು. ಈಗ ಮತ್ತೊಮ್ಮೆ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.
ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದ ಟಾಸ್ ಅರ್ಧ ಗಂಟೆ ಮೊದಲು ಅಂದರೆ ಸಂಜೆ 7.30ಕ್ಕೆ ನಡೆಯಲಿದೆ. 2025ರ ಚಾಂಪಿಯನ್ಸ್ ಟ್ರೋಫಿಯಂತೆ, ಭಾರತ-ಪಾಕಿಸ್ತಾನ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11: ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಫಖರ್ ಜಮಾನ್, ಸಲ್ಮಾನ್ ಆಘಾ (ನಾಯಕ), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಸುಫಿಯಾನ್ ಮುಕೀಮ್, ಅಬ್ರಾರ್ ಅಹ್ಮದ್.
ಭಾರತೀಯರಿಂದ ಭಾರಿ ವಿರೋಧ
ಈ ನಡುವೆ ಪಾಕಿಸ್ತಾನ ಜೊತೆಗೆ ಭಾರತ ಕ್ರಿಕೆಟ್ ಆಡುವುದಕ್ಕೆ ಭಾರತದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪಾಕ್ ಜೊತೆಗಿನ ಎಲ್ಲ ಸಂಬಂಧಗಳನ್ನು ಭಾರತ ಕಡಿದುಕೊಂಡಿದ್ದು, ಇಂಥ ಪರಿಸ್ಥಿತಿಯಲ್ಲಿ ಬಿಸಿಸಿಐ ಈ ಪಂದ್ಯ ಆಡಲು ಒಪ್ಪಬಾರದಿತ್ತು ಎಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ. ರಾಜಕೀಯವಾಗಿಯೂ ಪಂದ್ಯಕ್ಕೆ ವಿರೋಧವಿದೆ. ಅಲ್ಲಲ್ಲಿ ಬಿಸಿಸಿಐ ವಿರುದ್ಧ ಪ್ರತಿಭಟನೆ ನಡೆದಿದೆ.
2025ರ ಏಷ್ಯಾಕಪ್ ಟೂರ್ನಿ ವೇಳಾಪಟ್ಟಿ ಘೋಷಣೆಯಾದಾಗಿನಿಂದಲೂ ಇಂಡೋ-ಪಾಕ್ ಪಂದ್ಯವನ್ನು ರದ್ದುಗೊಳಿಸಬೇಕೆಂಬ ಕೂಗು ಇದೆ. ಪಾಕ್ ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ನರಮೇಧ, ಇದಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರತ ಪ್ರತೀಕಾರದ ದಾಳಿ ಬಳಿಕ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿವೆ. ಹಾಗಾಗಿ ಭಾರತದ ಶತ್ರುರಾಷ್ಟ್ರದ ವಿರುದ್ಧ ಪಂದ್ಯವನ್ನು ರದ್ದುಗೊಳಿಸಬೇಕೆಂಬ ಕೂಗು ಕೇಳಿಬಂದಿದೆ.
ರಾಜಕೀಯ ನಾಯಕರು ಮತ್ತೊಮ್ಮೆ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ಒತ್ತಾಯಿಸಿದ್ದಾರೆ. ಟೀಕೆಗಳು ಹೆಚ್ಚಾಗಿ ವಿರೋಧ ಪಕ್ಷಗಳಿಂದಲೇ ಕೇಳಿಬರುತ್ತಿವೆ. ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಪಂದ್ಯವನ್ನು ವಿರೋಧಿಸಿವೆ.
ಎಎಪಿ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಕಚೇರಿಯ ಹೊರಗೆ ಪಾಕಿಸ್ತಾನ ಲೇಬಲ್ ಹೊಂದಿರುವ ಪ್ರತಿಕೃತಿಯನ್ನು ದಹಿಸಿದ್ದಾರೆ. ಮಾಜಿ ಸಚಿವ ಸೌರಭ್ ಭಾರದ್ವಾಜ್ ಪಂದ್ಯದ ನೇರ ಪ್ರಸಾರ ಮಾಡುವ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಬಹಿಷ್ಕರಿಸುವಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ. ನಮ್ಮ ಸಹೋದರಿಯರ ಸಿಂದೂರವನ್ನು ಅಳಿಸುವ ಇಂತಹ ಅಸಹ್ಯಕರ ಜನರೊಂದಿಗೆ ಭಾರತ ಸರ್ಕಾರ ಕ್ರಿಕೆಟಿಗರನ್ನು ಆಡುವಂತೆ ಮಾಡುತ್ತಿದೆ. ಭಾರತ-ಪಾಕಿಸ್ತಾನ ಪಂದ್ಯಗಳನ್ನು ಪ್ರಸಾರ ಮಾಡುವ ದೆಹಲಿಯಲ್ಲಿರುವ ಎಲ್ಲ ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ ಬಗ್ಗೆ ಪ್ರಧಾನಿಯವರ ‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ. ‘ರಕ್ತ ಮತ್ತು ಕ್ರಿಕೆಟ್’ ಹೇಗೆ ಒಟ್ಟಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ. ‘ಯುದ್ಧ ಮತ್ತು ಕ್ರಿಕೆಟ್ ಒಂದೇ ಸಮಯದಲ್ಲಿ ಹೇಗೆ ಇರಲು ಸಾಧ್ಯ? ಅವರು ದೇಶಭಕ್ತಿಯ ವ್ಯವಹಾರವನ್ನು ಮಾಡಿದ್ದಾರೆ. ಅವರಿಗೆ ಕೇವಲ ಹಣ ಬೇಕು’ ಎಂದು ಠಾಕ್ರೆ ಟೀಕಿಸಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ತಮ್ಮ ಗಂಡಂದಿರನ್ನು ಕಳೆದುಕೊಂಡ ಸಹೋದರಿಯರನ್ನು ನೋಡಿಕೊಳ್ಳದೆ ಕೆಲ ಜನರು ಹಣ ಸಂಪಾದಿಸುವುದರಲ್ಲಿ ನಿರತರಾಗಿದ್ದಾರೆ. ಇದು ವ್ಯವಹಾರ. ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಉತ್ಸಾಹವಿದೆ. ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನಮ್ಮ ಸಹೋದರಿಯರ ಸಿಂಧೂರ ಅಳಿಸಿದ್ದಾರೆಂದು ಅವರು ಬೇಸರಗೊಂಡಿಲ್ಲ. ಈ ಜನರು ಕ್ರಿಕೆಟ್ ಹೆಸರಿನಲ್ಲಿ ಹಣ ಸಂಪಾದಿಸುವಲ್ಲಿ ನಿರತರಾಗಿದ್ದಾರೆ. ನಮ್ಮ ಸಹೋದರಿಯರ ಕುಟುಂಬಗಳು ನಾಶವಾದವು. ಆದರೆ, ಇವರು ಪಾಕಿಸ್ತಾನಿಗಳೊಂದಿಗೆ ಕ್ರಿಕೆಟ್ ಆಡಲು ಹೊರಟಿದ್ದಾರೆ. ಸರ್ಕಾರ ನಾಚಿಕೆಪಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.