ದುಬೈ: ಪಾಕಿಸ್ತಾನದ ವಿರುದ್ಧ 6 ವಿಕೆಟ್ಗಳ ಅಧಿಕಾರಯುತ ಜಯದೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಅಷ್ಟು ಮಾತ್ರವಲ್ಲದೆ, ವಿರಾಟ್ ಕೊಹ್ಲಿಯ 51ನೇ ಶತಕ ಭಾರತದ ಸಂಭ್ರಮವನ್ನು ನೂರ್ಮಡಿಗೊಳಿಸಿತು.
ನಿನ್ನೆ (ಫೆ.23) ಭಾರತ ಹಾಗೂ ಪಾಕಿಸ್ತಾನದ ಮ್ಯಾಚ್ ನಡೆದಿದ್ದು, ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನ 49.4 ಓವರ್ಗಳಲ್ಲಿ 241 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್ ಆಯಿತು. ಪಾಕ್ಗೆ ಜವಾಬಿತ್ತ ಭಾರತ 42.3 ಓವರ್ಗಳಲ್ಲಿ 4 ವಿಕೆಟಿಗೆ 244 ರನ್ ಬಾರಿಸಿತು. ಇದರೊಂದಿಗೆ 2017ರ ಫೈನಲ್ ಸೋಲಿಗೆ ಸೇಡನ್ನೂ ತೀರಿಸಿಕೊಂಡಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ 6 ಪಂದ್ಯಗಳಲ್ಲಿ ಭಾರತ ಸಾಧಿಸಿದ 3ನೇ ಜಯವಾಗಿ ನಿನ್ನೆಯ ಪಂದ್ಯ ಜರುಗಿತ್ತು.
ಪಾಕಿಸ್ಥಾನಕ್ಕೆ ಕಡಿವಾಣ :
ಪಾಕಿಸ್ತಾನ ಮೊದಲಿಗೆ ಅರ್ಧ ಶತಕ ಗಳಿಸಿತ್ತು. ವನ್ಡೌನ್ ಬ್ಯಾಟರ್ ಸೌದ್ ಶಕೀಲ್ ಸರ್ವಾಧಿಕ 62 ರನ್ (76 ಎಸೆತ, 5 ಬೌಂಡರಿ), ನಾಯಕ ಮೊಹಮ್ಮದ್ ರಿಜ್ವಾನ್ 46 ರನ್ ಗಳಿಸಿದ್ದಾರೆ. ಇವರಿಬ್ಬರ ಅರ್ಧ ಶತಕದ ಆಟ ಪಾಕ್ ಸರದಿಯ ಹೈಲೈಟ್ ಎನಿಸಿತು. ಕೊನೆಯಲ್ಲಿ ಖುಷ್ದಿಲ್ ಷಾ 39 ಎಸೆತಗಳಿಂದ 38 ರನ್ ಹೊಡೆದರು.
ಭಾರತದ ಬೌಲಿಂಗ್ನಲ್ಲಿ ಚೈನಾಮನ್ ಕುಲದೀಪ್ ಯಾದವ್ (40ಕ್ಕೆ 3) ಸಖ್ಖತ್ ಮಿಂಚಿದ್ದಾರೆ. ಸಲ್ಮಾನ್ ಆಘಾ ಮತ್ತು ಶಾಹೀನ್ ಶಾ ಅಫ್ರಿದಿ ವಿಕೆಟ್ಗಳನ್ನು ಹಾರಿಸಿದ ಕುಲದೀಪ್ ಪಾಕಿಸ್ಥಾನದ ದೊಡ್ಡ ಮೊತ್ತದ ಯೋಜನೆಗೆ ಬ್ರೇಕ್ ಹಾಕಿದ್ದಾರೆ. ಹಾರ್ದಿಕ್ ಪಾಂಡ್ಯ 2 ವಿಕೆಟ್ ಕೆಡವಿದರೆ, ಶಮಿ ಯಾವುದೇ ಪರಿಣಾಮ ಬೀರಲಿಲ್ಲ. ಮೊದಲ ಓವರ್ನಲ್ಲೇ 5 ವೈಡ್ ಎಸೆದು ಲಯ ತಪ್ಪಿದ್ದಾರೆ. ಶಮಿಯನ್ನು ಹೊರತುಪಡಿಸಿ ಉಳಿದವರೆಲ್ಲ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಭಾರತಕ್ಕಿನ್ನು 6 ದಿನಗಳ ಕಾಲ ವಿರಾಮ. ಮುಂದಿನ ರವಿವಾರ ನ್ಯೂಜಿಲ್ಯಾಂಡ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಇದು ಲೀಗ್ ಹಂತದ ಕೊನೆಯ ಪಂದ್ಯವೂ ಆಗಿದೆ.