ನವದೆಹಲಿ : ಇಲ್ಲಿಯವರೆಗೆ ದೇಶದಿಂದ ಕಳ್ಳಸಾಗಣೆ ಮಾಡಲಾದ 588 ಭಾರತೀಯ ಪ್ರಾಚೀನ ವಸ್ತುಗಳನ್ನು ಅಮೆರಿಕದಿಂದ ಮರಳಿ ಪಡೆಯಲಾಗಿದ್ದು, ಅವುಗಳಲ್ಲಿ 297 ಅನ್ನು 2024 ರಲ್ಲಿ ಸ್ವದೇಶಕ್ಕೆ ವಾಪಸ್ ತರಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಪ್ರಾಚೀನ ವಸ್ತುಗಳ ಅಕ್ರಮ ವ್ಯಾಪಾರವನ್ನು ತಡೆಗಟ್ಟಲು ಅಮೆರಿಕ-ಭಾರತ ಸಾಂಸ್ಕೃತಿಕ ಆಸ್ತಿ ಒಪ್ಪಂದದ ಅಡಿಯಲ್ಲಿ “ಲೂಟಿ ಮಾಡಿದ ಅಥವಾ ಕದ್ದ ಕಲಾಕೃತಿಗಳ” ಸಂಖ್ಯೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದ್ದಾರೆ.
ಭಾರತೀಯ ಪ್ರಾಚೀನ ವಸ್ತುಗಳ ಕಳ್ಳಸಾಗಣೆಯನ್ನು ತಡೆಗಟ್ಟಲು ಅಮೆರಿಕದೊಂದಿಗೆ ಸಾಂಸ್ಕೃತಿಕ ಆಸ್ತಿ ಒಪ್ಪಂದ (ಸಿಪಿಎ)ಕ್ಕೆ ಸಹಿ ಹಾಕಲಾಗಿದೆ. ಕಳುವಾದ ಪ್ರಾಚೀನ ವಸ್ತುಗಳನ್ನು ಮರುಪಡೆಯುವಲ್ಲಿ ಭಾರತದ ಪ್ರಯತ್ನಗಳನ್ನು ಬಲಪಡಿಸಲು ಸರ್ಕಾರವು ಅಂತರರಾಷ್ಟ್ರೀಯ ಸಂಸ್ಥೆಗಳು ಅಥವಾ ಇತರ ರಾಷ್ಟ್ರಗಳೊಂದಿಗೆ ಸಹಕರಿಸಲು ಯೋಜಿಸುತ್ತಿದೆಯೇ ಎಂದು ಸಚಿವರನ್ನು ಕೇಳಲಾಯಿತು.
ಭಾರತವು ಅವಶ್ಯಕತೆಗೆ ಅನುಗುಣವಾಗಿ ಯುನೆಸ್ಕೋ ಮತ್ತು ಇಂಟರ್‌ಪೋಲ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ. ತಾಂತ್ರಿಕ ನೆರವು, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ಆಸ್ತಿಯ ಲೂಟಿ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ತಿಳುವಳಿಕೆಯನ್ನು ಬೆಳೆಸಲು ಸಿಪಿಎ ಅವಕಾಶವನ್ನು ಹೊಂದಿದೆ ಎಂದು ಸಚಿವರು ಹೇಳಿದರು.