ಚಂಡೀಗಢ: ಆಪರೇಷನ್ ಸಿಂದೂರ್ ನಂತರ ಪಾಕಿಸ್ತಾನ ಭಾರತದ ಮೇಲೆ ಭಾರೀ ಡ್ರೋನ್‌ಗಳು ಮತ್ತು ಶೆಲ್ ದಾಳಿಗಳನ್ನು ನಡೆಸುತ್ತಿದೆ. ಇಂದು ಮುಂಜಾನೆ ಅಮೃತಸರದ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿದೆ. ಭಾರತೀಯ ಪಡೆಗಳು ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ನಾಗರಿಕರನ್ನು ಅಪಾಯಕ್ಕೆ ಸಿಲುಕಿಸುವ ಡ್ರೋನ್‌ಗಳನ್ನು ಭಾರತೀಯ ವಾಯು ರಕ್ಷಣಾ ಘಟಕಗಳು ನಾಶಪಡಿಸಿವೆ ಎಂದು ಭಾರತೀಯ ಸೇನೆಯು ಹೇಳಿದೆ. ಪಾಕಿಸ್ತಾನದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಪಡೆಗಳು ರಾತ್ರೋರಾತ್ರಿ ಹಲವಾರು ಪಾಕಿಸ್ತಾನಿ ಮಿಲಿಟರಿ ನೆಲೆಗಳು ಹಾಗೂ ಭಯೋತ್ಪಾಕ ಲಾಂಚ್‌ಪ್ಯಾಡ್ ಅನ್ನು ನಾಶಪಡಿಸಿವೆ.
ಭಾರತದ ಪಶ್ಚಿಮ ಗಡಿಗಳಲ್ಲಿ ಪಾಕಿಸ್ತಾನದ ಡ್ರೋನ್ ದಾಳಿ ಮತ್ತು ಇತರ ಯುದ್ಧಸಾಮಗ್ರಿಗಳ ದಾಳಿ ಮುಂದುವರೆದಿದೆ. ಇಂದು ಬೆಳಿಗ್ಗೆ ಸರಿಸುಮಾರು 5 ಗಂಟೆಗೆ, ಅಮೃತಸರದ ಖಾಸಾ ಕ್ಯಾಂಟ್ ಮೇಲೆ ಹಾರುತ್ತಿರುವ ಬಹು ಶತ್ರು ಶಸ್ತ್ರಸಜ್ಜಿತ ಡ್ರೋನ್‌ಗಳು ಕಂಡುಬಂದವು. ನಮ್ಮ ವಾಯು ರಕ್ಷಣಾ ಘಟಕಗಳು ಶತ್ರು ಡ್ರೋನ್‌ಗಳನ್ನು ತಕ್ಷಣವೇ ತೊಡಗಿಸಿಕೊಂಡು ನಾಶಪಡಿಸಿದವು” ಎಂದು ಭಾರತೀಯ ಸೇನೆ ತಿಳಿಸಿದೆ. ಪಾಕಿಸ್ತಾನದ ಡ್ರೋನ್ ಒಂದು ನಿನ್ನೆ ರಾತ್ರಿ ಪಂಜಾಬ್ನ ಫಿರೋಜ್‌ಪುರದ ವಸತಿ ಪ್ರದೇಶಕ್ಕೆ ಅಪ್ಪಳಿಸಿದೆ. ಏಕಾಏಕಿ ನಿನ್ನೆ ಡ್ರೋನ್ ಫಿರೋಜ್‌ಪುರದ ವಸತಿ ಪ್ರದೇಶಕ್ಕೆ ಡಿಕ್ಕಿ ಹೊಡೆದಿದ್ದು, ಒಂದು ಕುಟುಂಬಕ್ಕೆ ಗಾಯವಾಗಿದೆ. ಕುಟುಂಬವನ್ನು ಸದ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಾಕಿಸ್ತಾನ ಡ್ರೋನ್‌ಗಳು ಮತ್ತು ಕ್ಷಿಪಣಿ ದಾಳಿ(India Pakistan Attack) ನಡೆಸಿದ ಬೆನ್ನಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು ಇಸ್ಲಾಮಾಬಾದ್‌ನ ನಾಲ್ಕು ವಾಯುನೆಲೆಗಳನ್ನು ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಮಿಲಿಟರಿ ವರದಿಯ ಪ್ರಕಾರ, ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ವಾಯುಪಡೆಯ ನೆಲೆಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎನ್ನಲಾಗಿದೆ.
ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ‘ಪಾಕ್‌ನ ನೂರ್ ಖಾನ್ (ಚಕ್ಲಾಲಾ, ರಾವಲ್ಪಿಂಡಿ), ಮುರಿಯ್ (ಚಕ್ವಾಲ್) ಮತ್ತು ರಫೀಕಿ (ಜಾಂಗ್ ಜಿಲ್ಲೆಯ ಶೋರ್ಕೋಟ್) ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿದೆ ಎಂದಿದ್ದಾರೆ. ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.