ಇಸ್ಲಾಮಾಬಾದ್ : ಭಾರತದ ದಾಳಿಯು ಪಾಕಿಸ್ತಾನದ ಸಾರ್ವಭೌಮತ್ವ, ವಿಶ್ವಸಂಸ್ಥೆಯ, ಅಂತರರಾಷ್ಟ್ರೀಯ ಕಾನೂನು ಹಾಗೂ ಅಂತರ-ರಾಜ್ಯ ಸಂಬಂಧಗಳ ಸ್ಥಾಪಿತ ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಕ್ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಮೇಲಿನ ಭಾರತದ ಆಕ್ರಮಣವನ್ನು ಪಾಕಿಸ್ತಾನ ಬಲವಾಗಿ ಖಂಡಿಸುತ್ತದೆ. ಪಹಲ್ಗಾಮ್ ದಾಳಿಯ ನಂತರ, ಭಾರತೀಯ ನಾಯಕತ್ವವು ಮತ್ತೊಮ್ಮೆ ಭಯೋತ್ಪಾದನೆಯ ನೆಪವನ್ನು ಮುಂದಕ್ಕೆ ಕೊಂಡೊಯ್ಯಲು ಬಳಸಿದೆ ಎಂದು ಬರೆದುಕೊಂಡಿದ್ದಾರೆ.
ಭಾರತದ ಈ ದಾಳಿಯು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಭಾರತದ ಅಜಾಗರೂಕ ಕ್ರಮವು ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳನ್ನು ಪ್ರಮುಖ ಸಂಘರ್ಷಕ್ಕೆ ಹತ್ತಿರ ತಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಬುಧವಾರ ನಸುಕಿನ ಜಾವ ಭಾರತೀಯ ಸೇನೆ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದು, 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತದ ಈ ದಾಳಿಗೆ ಪಾಕಿಸ್ತಾನದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.