ದೆಹಲಿ : ಬಿಎಸ್ಎನ್ಎಲ್ನ ಸ್ವದೇಶಿ 4G ‘ನೆಟ್ವರ್ಕ್ ಸ್ಟಾಕ್’ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಸೆಪ್ಟೆಂಬರ್ 27) ಬಿಡುಗಡೆ ಮಾಡಲಿದ್ದಾರೆ. ಇದು ಭಾರತವನ್ನು ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ ಮತ್ತು ಚೀನಾ ಜೊತೆಗೆ ತಮ್ಮದೇ ಆದ ದೂರಸಂಪರ್ಕ ಉಪಕರಣಗಳನ್ನು ತಯಾರಿಸುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಲಿದೆ. ಈ ಉಡಾವಣೆಯು ಭಾರತದ ದೂರಸಂಪರ್ಕ ವಲಯ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಒಂದು ಪ್ರಮುಖ ಮೈಲಿಗಲ್ಲು.
ಒಡಿಶಾದ ಜಾರ್ಸುಗುಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 97,500ಕ್ಕೂ ಹೆಚ್ಚು 4G ಮೊಬೈಲ್ ಟವರ್ಗಳನ್ನು ಲೋಕಾರ್ಪಣೆ ಮಾಡಲಿದ್ದು, ಆ ಪೈಕಿ 92,600ಕ್ಕೂ ಹೆಚ್ಚು ಟವರ್ಗಳನ್ನು ಬಿಎಸ್ಎನ್ಎಲ್ ಸ್ವದೇಶೀ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. 5Gಗೆ ನವೀಕರಿಸಬಹುದಾದ ಸಾಮರ್ಥ್ಯವನ್ನೂ ಇವು ಹೊಂದಿವೆ. ಆ ಮೂಲಕ ಭಾರತವು ಕೇವಲ 1.2 ಬಿಲಿಯನ್ ಗ್ರಾಹಕರಿಗೆ ಕಡಿಮೆ ದರದ ಕರೆ ಮತ್ತು ಇಂಟರ್ನೆಟ್ ಸೇವೆ ನೀಡುವ ರಾಷ್ಟ್ರವಾಗಿರದೆ, ಸ್ವಂತವಾಗಿ ಟೆಲಿಕಾಂ ಉಪಕರಣಗಳನ್ನು ತಯಾರಿಸುವ ದೇಶವಾಗಿ ಹೊರಹೊಮ್ಮಿದೆ.
ಸುಮಾರು 26,700 ಸಂಪರ್ಕ ರಹಿತ ಹಳ್ಳಿಗಳು, ಗಡಿ ಭಾಗದ ಪ್ರದೇಶಗಳನ್ನ ತಲುಪುವ ಉದ್ದೇಶದಿಂದ ಡಿಜಿಟಲ್ ಭಾರತ ನಿಧಿ ಸ್ಯಾಚುರೇಶನ್ ಯೋಜನೆಯಡಿ 14,180 ಟವರ್ಗಳನ್ನು ನಿರ್ಮಿಸಲಾಗಿವೆ. ಬಿಎಸ್ಎನ್ಎಲ್ ಜೊತೆಗೆ, ರಿಲಾಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು ಕೂಡ 4,700 ಕ್ಕೂ ಹೆಚ್ಚು 4G ಟವರ್ಗಳನ್ನು ಸ್ಥಾಪಿಸಿವೆ.
ಈ ಟವರ್ ಗಳು 20 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರಿಗೆ ಸೇವೆ ನೀಡಲಿವೆ ಎಂದು ಅಂದಾಜಿಸಲಾಗಿದೆ. ಆನ್ ಲೈನ್ ಶಿಕ್ಷಣ, ಇ-ಆಡಳಿತ, ಡಿಜಿಟಲ್ ಪಾವತಿ ಸೇರಿ ಹತ್ತು ಹಲವು ವಿಚಾರಗಳಿಗೆ ಹೊಸ ಟವರ್ ಗಳು ನೆರವಾಗಲಿವೆ.