ಬೆಂಗಳೂರು : ಇಂಡಿಗೋ ವಿಮಾನ ಹಾರಾಟದಲ್ಲಿ 5ನೇ ದಿನವೂ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.
ಇಂಡಿಗೋ ಏರ್‌ಲೈನ್‌ನಲ್ಲಿ ಸಿಬ್ಬಂದಿ ಕೊರತೆಯಿಂದ ಸೃಷ್ಠಿಯಾದ ಆವಾಂತರ ಅಂತಿಂತದ್ದಲ್ಲ. ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋದ ಒಂದು ಸಾವಿರಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದ್ದು ಜನರು ವಿಮಾನ ನಿಲ್ದಾಣಗಳಲ್ಲಿ ಪರದಾಡುತ್ತಿರುವುದಂತೂ ಹೇಳತೀರದಾಗಿದೆ. ಆರಂಭದಲ್ಲಿ ಸಣ್ಣ ಸಮಸ್ಯೆಯಂತೆ ಭಾಸವಾದ ಇದು ಒಂದೆರಡು ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ವಿಮಾನಗಳಿದ್ದರೂ ಅದನ್ನು ಆಪರೇಟ್ ಮಾಡಲು ಸಿಬ್ಬಂದಿಗಳಿಲ್ಲದ ಸನ್ನಿವೇಶ ಇಂಡಿಗೋಗೆ ಬಂದಿದೆ. ಇದೇ ಕಾರಣದಿಂದಲೇ ದೆಹಲಿ, ಬೆಂಗಳೂರು, ಲಕ್ನೋ, ಜಮ್ಮು ಕಾಶ್ಮೀರ, ಚೆನ್ನೈ, ಹೈದರಾಬಾದ್, ಭೂಪಾಲ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಪೂರ್ಣವಾಗಿ ವಿಮಾನಗಳ ಹಾರಾಟ ರದ್ದು ಮಾಡಿರುವುದಾಗಿ ಇಂಡಿಗೋ ಘೋಷಣೆ ಮಾಡಿದೆ.
ಬುಕ್ ಮಾಡಿರುವ ವಿಮಾನಗಳು ಒಂದು ಕಡೆ ನಿರಂತರವಾಗಿ ವಿಳಂಬವಾಗಿ ಹತ್ತಾರು ಗಂಟೆಗಳ ಬಳಿಕ ರದ್ದಾದ ಹಿನ್ನಲೆ ಪ್ರಯಾಣಿಕರು ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಪ್ರತಿಭಟನೆ ನಡೆಸಿದರು. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡರು.
ಇದೇ ಪರಿಸ್ಥಿತಿಯ ಲಾಭ ಪಡೆದಿರುವ ಇತರೆ ಏರ್‌ಲೈನ್‌ಗಳು ಏರ್ ಫೇರ್ ನಿಯಮಗಳನ್ನು ಉಲ್ಲಂಘಿಸಿ ಟಿಕೆಟ್‌ಗಳ ಮೇಲೆ ಹತ್ತಕ್ಕಿಂತ ಹೆಚ್ಚು ಪಟ್ಟು ಬೆಲೆಯನ್ನು ಏರಿಕೆ ಮಾಡಿವೆ. ಮಹಾನಗರಿಗೆ 5 ರಿಂದ 8 ಸಾವಿರ ರೂಪಾಯಿಗೆ ಸಿಗಬೇಕಿದ್ದ ಎಕಾನಮಿ ಟಿಕೆಟ್‌ಗಳು 50 ರಿಂದ 80 ಸಾವಿರ ರೂಪಾಯಿವರೆಗೂ ಏರಿಕೆಯಾಗಿದೆ.

































