ನವದೆಹಲಿ : ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಭಾಗವಹಿಸುವ ಸಾಧ್ಯತೆ ಇದೆ.
ಈ ಹಿಂದೆ ಪ್ರಬೋವೊ ಭಾರತಕ್ಕೆ ಭೇಟಿ ನೀಡಿದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂದು ವರದಿಯಾಗಿತ್ತು. ಇದೀಗ ಭಾರತ ನಡೆಸಿದ ಮಾತುಕತೆ ಬಳಿಕ ಭಾರತದಿಂದ ನೇರವಾಗಿ ಪಾಕಿಸ್ತಾನಕ್ಕೆ ಹೋಗುವ ಯೋಜನೆಯನ್ನು ಪ್ರಬೋವೊ ಮುಂದೂಡಿದ್ದಾರೆ.
ಭಾರತವು ಮೂರನೇ ಬಾರಿಗೆ ಇಂಡೋನೇಷ್ಯಾ ಅಧ್ಯಕ್ಷರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸುತ್ತಿದೆ. ಭಾರತವು ಪ್ರತಿ ವರ್ಷ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ವಿಶ್ವ ನಾಯಕರನ್ನು ಆಹ್ವಾನಿಸುತ್ತದೆ. ಅದರಂತೆ ಈ ವರ್ಷ ಇಂಡೋನೇಷ್ಯಾ ಅಧ್ಯಕ್ಷ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಳೆದ ವರ್ಷ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಭಾಗವಹಿಸಿದ್ದರು. ಇಂಡೋನೇಷ್ಯಾ ಅಧ್ಯಕ್ಷ ಸುಕರ್ನೋ ಅವರು ಭಾರತದ ಮೊದಲ ಗಣರಾಜ್ಯೋತ್ಸವದ ಪರೇಡ್‌ನ ಮೊದಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.