ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ಸೇರಿದಂತೆ 16 ಜನರ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಐಐಎಸ್ಸಿಯಲ್ಲಿ ದಲಿತ ಪ್ರಾಧ್ಯಾಪಕರ ವಿರುದ್ಧದ ದೌರ್ಜನ್ಯ ಆರೋಪಿಸಿ ಪ್ರಾಧ್ಯಾಪಕ ಸಣ್ಣ ದುರ್ಗಪ್ಪ ಎನ್ನುವರು ಬೆಂಗಳೂರಿನ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದ್ರೆ, ಈ ಎಫ್ಐಆರ್ಗೆ ಇತ್ತೀಚೆಗೆ ಹೈಕೋರ್ಟ್ ತಡೆ ನೀಡಿತ್ತು. ಆದ್ರೆ, ಇದೀಗ ಅಂತಿಮವಾಗಿ ಹೈಕೋರ್ಟ್, ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಅಡಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಅಲ್ಲದೇ ದೂರುದಾರ ದುರ್ಗಪ್ಪ ವಿರುದ್ಧ ಕ್ರಿಮಿನಲ್, ನ್ಯಾಯಾಂಗ ನಿಂದನೆ ಪ್ರಕರಣದ ಅನುಮತಿ ಕೋರಿ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ ಅರ್ಜಿದಾರರು ಅಡ್ವೊಕೇಟ್ ಜನರಲ್ ಅವರನ್ನು ಸಂಪರ್ಕಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಇನ್ನು ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕ್ರಿಸ್ ಗೋಪಾಲಕೃಷ್ಣನ್, “ನಮ್ಮ ನ್ಯಾಯಾಲಯಗಳು ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಯುತ ವ್ಯವಸ್ಥೆಯಲ್ಲಿ ಕಾನೂನು ದುರುಪಯೋಗಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಈ ತೀರ್ಪು ಪುನರುಚ್ಚರಿಸುತ್ತದೆ. ಗೌರವಾನ್ವಿತ ಹೈಕೋರ್ಟ್, ಸುಳ್ಳುಗಳನ್ನು ನೋಡಿದೆ ಮತ್ತು ಸತ್ಯವನ್ನು ಎತ್ತಿಹಿಡಿದಿದೆ. ಇದಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
2014ರಿಂದ ಐಐಎಸ್ಸಿಯಲ್ಲಿ ನನ್ನ ವಿರುದ್ಧ ಜಾತಿ ದೌರ್ಜನ್ಯ ಎಸಗಲಾಗಿದೆ. 2014ರಲ್ಲಿನಕಲಿ ಹನಿಟ್ರ್ಯಾಪ್ ಮೂಲಕ ಕೆಲಸದಿಂದ ವಜಾಗೊಳಿಸಲಾಗಿತ್ತು. ನನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕೆಲಸದಿಂದ ವಜಾಗೊಳಿಸಿರುವ ಶಿಸ್ತು ಸಮಿತಿಯಲ್ಲಿಸುಪ್ರೀಂಕೋರ್ಟ್ನ ವಿಶಾಖ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ದಲಿತ ಎಂಬ ಒಂದೇ ಕಾರಣಕ್ಕೆ ನನ್ನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಐಐಎಸ್ಸಿಯಲ್ಲಿಜರುಗಿದ ಇತರೆ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿಇತರರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಣ್ಣ ದುರ್ಗಪ್ಪ ಆರೋಪಿಸಿದ್ದರು.
ಐಐಸಿಎಸ್ಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಭೋವಿ ಸಮುದಾಯದ ಡಾ. ಡಿ ಸಣ್ಣ ದುರ್ಗಪ್ಪ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಬೆಂಗಳೂರಿನ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರಾದ ಕೆ ರಾಜೇಶ್ ಕರ್ಣಂ ಅವರು ಜನವರಿ 17ರಂದು ಆದೇಶ ಹೊರಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಸದಾಶಿವನಗರ ಪೊಲೀಸರು, ಕ್ರಿಸ್ ಗೋಪಾಲಕೃಷ್ಣನ್ ಹಾಗೂ ಐಐಎಸ್ಸಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಕ್ರಿಸ್ ಗೋಪಾಲಕೃಷ್ಣನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪರಿಗಣಿಸಿದ್ದ ಹೈಕೋರ್ಟ್, ಎಫ್ಐಆರ್ಗೆ ತಡೆ ನೀಡಿತ್ತು. ಈಗ ಎಫ್ಐಆರ್ ಅನ್ನು ರದ್ದುಗೊಳಿಸಿದೆ.