ಐಟಿ ಕ್ಷೇತ್ರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಇನ್ಫೋಸಿಸ್ ಸಿಹಿಸುದ್ದಿ ನೀಡಿದೆ. ಇಪ್ಪತ್ತು ಸಾವಿರ ಹೊಸ ಪದವೀಧರರನ್ನು ನೇಮಿಸಿಕೊಳ್ಳುವುದಾಗಿ ಇನ್ಫೋಸಿಸ್ ಘೋಷಿಸಿದೆ.
ಭಾರತದ ಪ್ರಮುಖ ಐಟಿ ಸೇವಾ ಸಂಸ್ಥೆಗಳಲ್ಲಿ ಇನ್ಫೋಸಿಸ್ ಕೂಡ ಒಂದಾಗಿದ್ದು, 2026 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 17,000 ಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಅಲ್ಲದೇ ಇತರ ಸಂಸ್ಥೆಗಿಂತ ಭಿನ್ನವಾಗಿ ಇನ್ಫೋಸಿಸ್ ಉದ್ಯೋಗ ಕಡಿತವನ್ನು ತಳ್ಳಿಹಾಕಿದೆ ಮತ್ತು ತನ್ನ ಕಾರ್ಯಪಡೆಯನ್ನು ವಿಸ್ತರಿಸುವತ್ತ ಗಮನ ಹರಿಸಿದೆ ಎಂದು ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ.
ವರ್ಷಪೂರ್ತಿ ಕಾಲೇಜು ಪದವೀಧರರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವುದನ್ನು ಕಂಪನಿ ಮುಂದುವರಿಸುತ್ತದೆ ಎಂದು ಸಿಇಒ ತಿಳಿಸಿದ್ದಾರೆ. ಐಟಿ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆ, ರಚನಾತ್ಮಕ ಬದಲಾವಣೆಗಳೊಂದಿಗೆ ಹೋರಾಡುತ್ತಿರುವ ಸಂದರ್ಭದಲ್ಲಿ ಇನ್ಫೋಸಿಸ್ ನೇಮಕಾತಿಗೆ ಮುಂದಾಗಿರುವುದು ವಿಶೇಷವಾಗಿದೆ.
ಭಾರತದ ಯಾವುದೇ ಐಟಿ ಕಂಪನಿ ಘೋಷಿಸಲಾಗದ ಉದ್ಯೋಗ ಕಡಿತವನ್ನು ಇತ್ತೀಚಿಗಷ್ಟೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಘೋಷಿಸಿತ್ತು. ಬರೋಬ್ಬರಿ 12,000 ಕ್ಕೂ ಅಧಿಕ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿತ್ತು. ಇದು ಭಾರತದ ಐಟಿ ಉದ್ಯಮದಲ್ಲಿ ಅತಿ ಹೆಚ್ಚು ವಜಾಗೊಳಿಸುವಿಕೆಯಾಗಿತ್ತು. ಆದರೆ ಇನ್ಫೋಸಿಸ್ ಇದರ ವ್ಯತಿರಿಕ್ತವಾಗಿ ನೇಮಕಾತಿಗೆ ಮುಂದಾಗಿದೆ.
ಕಂಪನಿಯ ವಿಧಾನವು ವೆಚ್ಚ ಕಡಿತವಲ್ಲ, ಇದರ ಬದಲಾಗಿ ಕಾರ್ಯತಂತ್ರದ ಮರುಹೂಡಿಕೆಯಾಗಿದೆ. ಇನ್ಫೋಸಿಸ್ ಉದ್ಯೋಗ ಕಡಿತ ತಳ್ಳಿಹಾಕಿದ್ದು, ತನ್ನ ಕಾರ್ಯಪಡೆಯನ್ನು ವಿಸ್ತರಿಸುವತ್ತ ಗಮನ ಹರಿಸಿದೆ. ಜತೆಗೆ ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳಬಲ್ಲ ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯನ್ನು ನಿರ್ಮಿಸುವ ನಂಬಿಕೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ವಿವಿಧ ಹಂತಗಳಲ್ಲಿ ತರಬೇತಿ: ಈಗಾಗಲೇ ಇನ್ಫೋಸಿಸ್ ವಿವಿಧ ಹಂತಗಳಲ್ಲಿ ಸುಮಾರು 2,75,000 ಉದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ನೇಮಕಾತಿ ತಂತ್ರವು ಕೃತಕ ಬುದ್ಧಿಮತ್ತೆ ಮತ್ತು ಕಾರ್ಯಪಡೆಯ ಮರುಕೌಶಲ್ಯದಲ್ಲಿನ ಹೂಡಿಕೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಇದು ಕಂಪನಿ ಮುಂಚೂಣಿಗೆ ತರಲು ಸಹಾಯ ಮಾಡಲಿದೆ ಎಂದು ಪರೇಖ್ ತಿಳಿಸಿದ್ದಾರೆ.
ಎಐ ಆಧಾರಿತ ಆಟೋಮೆಷನ್‌ನಿಂದ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಹೆಚ್ಚಿರುವ ಬೇಡಿಕೆ ಪೂರೈಕೆಗಾಗಿ ಪ್ರತಿಶತ 5 ರಿಂದ 15ರಷ್ಟು ಉತ್ಪಾದಕತೆಯನ್ನು ಹೆಚ್ಚಿಸಲಿದೆ. ಎಐಗೆ ಕೌಶಲ್ಯಯುತ ಮಾನವ ಸಂಪನ್ಮೂಲ ಜತೆಯಾದರೆ ಉತ್ತಮ ಫಲಿತಾಂಶ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
ಕಂಪನಿಯ ಪ್ರಮುಖ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಇನ್ಫೋಸಿಸ್ ಫಿನಾಕಲ್ ಪ್ರತಿಶತ 20 ರಷ್ಟು ಹೆಚ್ಚುವರಿ ಉತ್ಪಾದಕತೆ ಸಾಧಿಸಿದೆ. ಎಐಗೆ ಕೌಶಲ್ಯಯುತ ಮಾನವ ಸಂಪನ್ಮೂಲ ಮಿಶ್ರಣ ಮಾಡುವ ಮೂಲಕ ಈ ಫಲಿತಾಂಶ ಸಾಧಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.