ಬೆಂಗಳೂರು :ಇನ್ಫೋಸಿಸ್ನಲ್ಲಿ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲಾಗುತ್ತಿದೆ ಎಂದು ಟೆಕ್ ಉದ್ಯೋಗಿಗಳ ಸ್ವತಂತ್ರ ಸಂಘಟನೆಯೊಂದು ನೀಡಿದ ದೂರನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಕಾರ್ಮಿಕ ಇಲಾಖೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚನೆ ನೀಡಿದೆ.
ಇನ್ಫೋಸಿಸ್ ಮೈಸೂರು ಕ್ಯಾಂಪಸ್ನಲ್ಲಿ ತರಬೇತಿ ಹಂತದಲ್ಲಿರುವ ಸುಮಾರು 300 ಹೊಸ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವುದಾಗಿ ಇನ್ಫೋಸಿಸ್ ಒಪ್ಪಿಕೊಂಡಿತ್ತು. ಆದರೆ ಈ ಸಂಖ್ಯೆಗಳ ಬಗ್ಗೆ ಟೆಕ್ ಉದ್ಯೋಗಿಗಳ ಸ್ವತಂತ್ರ ಸಂಘಟನೆ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೆ ಸುಮಾರು 700 ರಷ್ಟು ಉದ್ಯೋಗಿಗಳನ್ನು ಇನ್ಫೋಸಿಸ್ ವಜಾ ಗೊಳಿಸುತ್ತಿದೆ ಎಂದು ಆರೋಪಿಸಿತ್ತು.ಅಲ್ಲದೇ ಕೇಂದ್ರ ಕಾರ್ಮಿಕ ಇಲಾಖೆಗೆ ಅಧಿಕೃತವಾಗಿ ಪತ್ರ ಬರೆದು ದೂರು ನೀಡಿತ್ತು.ಇನ್ಫೋಸಿಸ್ ಲೇಆಫ್ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.
ಆಫರ್ ಲೆಟರ್ ಕೊಟ್ಟ ನಂತರ ಎರಡು ವರ್ಷ ಕಾಯಿಸಿ ಉದ್ಯೋಗಕ್ಕೆ ಸೇರಿಸಿಕೊಂಡವರನ್ನು ಇನ್ಫೋಸಿಸ್ ಈಗ ಕೆಲಸದಿಂದ ತೆಗೆದುಹಾಕುತ್ತಿದೆ. ಈಗಾಗಲೇ ಎರಡು ವರ್ಷ ಕಾದಿರುವ ಅವರು ಉದ್ಯೋಗ ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಆಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.