ಚಿತ್ರದುರ್ಗ : ಸುಪ್ರಿಂಕೋರ್ಟ್ ಮಾರ್ಗದರ್ಶನದಂತೆ ನಾಗಮೋಹನ್ದಾಸ್ ಆಯೋಗ ದತ್ತಾಂಶ ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಿರುವುದು ಸರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಸಬೂಬು ಹೇಳದೆ ಕೂಡಲೆ ಒಳ ಮೀಸಲಾತಿಯನ್ನು ಜಾರಿಗೊಳಿಸುವಂತೆ ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿ ಬಗ್ಗೆ ಒಬ್ಬೊಬ್ಬರು ಒಂದು ರೀತಿಯ ಗೊಂದಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಮೀಸಲಾತಿ ನೀಡುವುದಕ್ಕಾಗಿ ದತ್ತಾಂಶ ಸಂಗ್ರಹಿಸಲು ರಚಿಸಿರುವ ನಾಗಮೋಹನ್ದಾಸ್ ಆಯೋಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ನಿಖರವಾದ ಮಾಹಿಸಿ ಸಂಗ್ರಹಿಸಿದೆ. ನಮ್ಮ ಜಾತಿ ಹೆಚ್ಚಿನ ಸಂಖ್ಯೆಯಲ್ಲಿದೆ. ನಮ್ಮದು ಜಾಸ್ತಿಯಿದೆ ಎನ್ನುವ ವಿತ್ತಂಡ ವಾದಗಳು ಬೇಡ. ನೂರು ಪರ್ಸೆಂಟ್ ಸಮೀಕ್ಷೆ ಆಗಿಲ್ಲ ಎನ್ನುವುದು ಕಪೋಕಲ್ಪಿತ. ಸುಪ್ರೀಂಕೋರ್ಟ್ ಮಾರ್ಗದರ್ಶನದ ಚೌಕಟ್ಟಿನಲ್ಲಿ ಆಯೋಗ ಮಾಹಿಸಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಹಾಗಾಗಿ ಆ.19 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕೆಂದು ಜೆ.ಯಾದವರೆಡ್ಡಿ ಮನವಿ ಮಾಡಿದರು.
ಒಳ ಜಗಳದಿಂದ ಒಳ ಮೀಸಲಾತಿ ಅನುಷ್ಠಾನ ವಿಳಂಭವಾಗುವುದು ಬೇಡ. ವಾದ-ವಿವಾದಕ್ಕೆ ಅವಕಾಶ ಕೊಡದೆ ವಸ್ತುನಿಷ್ಠವಾಗಿ ನೀಡಿರುವ ವರದಿಯನ್ನು ಯಥಾವತ್ತಾಗಿ ಸರ್ಕಾರ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಹೊಸ ನೇಮಕಾತಿಗಳಿಗೆ ಅಡ್ಡಿಯಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ವಿಚಾರದಲ್ಲಿ ನಿರ್ಲಕ್ಷೆ ವಹಿಸಬಾರದೆಂದು ಆಗ್ರಹಿಸಿದರು.
ನ್ಯಾಯವಾದಿ ಸಿ.ಶಿವುಯಾದವ್ ಮಾತನಾಡಿ ನಾಗಮೋಹನ್ದಾಸ್ ಆಯೋಗ ನಡೆಸಿರುವ ಸಮೀಕ್ಷೆ ಸತ್ಯವಾಗಿದೆ. ಯಾವುದೇ ಕಾರಣಕ್ಕೂ ಮುಂದೂಡಬಾರದು. ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ತಡವಾಗಿದೆ. ಮೊದಲು ಯಥಾವತ್ತಾಗಿ ಜಾರಿಗೊಳಿಸಿ ನಂತರ ಏನಾದರು ಲೋಪದೋಷಗಳಿದ್ದರೆ ಮುಂದೆ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದರು.
ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಮಾತನಾಡುತ್ತ ಗೊಂದಲದಲ್ಲಿ ಕಾಲಹರಣ ಮಾಡುವ ಬದಲು ರಾಜ್ಯ ಸರ್ಕಾರ ಮೊದಲು ಒಳ ಮೀಸಲಾತಿಯನ್ನು ಜಾರಿಗೆ ತರಲಿ ಎಂದು ಮನವಿ ಮಾಡಿದರು.
ಅಲೆಮಾರಿ ಮತ್ತು ಅರೆಅಲೆಮಾರಿ ನಿಗಮದ ಜಿಲ್ಲಾ ಸಮಿತಿ ಸದಸ್ಯ ನ್ಯಾಯವಾದಿ ಓ.ಪ್ರತಾಪ್ಜೋಗಿ ಮಾತನಾಡಿ ಒಳ ಮೀಸಲಾತಿ ಅನುಷ್ಟಾನ ಈಗಾಗಲೆ ತಡವಾಗಿದೆ. ಇನ್ನು ವಿಳಂಭವಾಗುವುದು ಬೇಡ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಿಕೊಳ್ಳದ ಕಾರಣ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕಾಗಿ ನಾಗಮೋಹನ್ದಾಸ್ ಆಯೋಗದ ವರದಿಯನ್ನು ಜಾರಿಗೆ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಒತ್ತಾಯಿಸಿದರು.
ನ್ಯಾಯವಾದಿ ಶರಣಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.