ಉತ್ತರ ಪ್ರದೇಶ : ಪ್ರತಿ ವರ್ಷವೂ ಸಾವಿರಾರು ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಕೆಲವರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಸಫಲರಾಗುತ್ತಾರೆ. ಕೆಲವರು ಹಲವಾರು ಪ್ರಯತ್ನಗಳ ನಂತರ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ತಮ್ಮ ಐದನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ತೃಪ್ತಿ ಕಲ್ಹಾನ್ಸ್ ಅವರ ಸ್ಫೂರ್ತಿದಾಯಕ ಕತೆ ಇದು.
ಐಎಎಸ್ ಅಧಿಕಾರಿ ತೃಪ್ತಿ ಕಲ್ಹಾನ್ಸ್ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯವರು. ಅವರು ಫಾತಿಮಾ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು ಮತ್ತು ದೆಹಲಿ ವಿಶ್ವವಿದ್ಯಾಲಯದ ಕಮಲಾ ನೆಹರು ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು.
ಶಾಲಾ-ಕಾಲೇಜು ದಿನಗಳಲ್ಲಿ ತೃಪ್ತಿ ಎಂದಿಗೂ ಓದಿನ ಮೇಲೆ ಹೆಚ್ಚು ಗಮನ ಹರಿಸಿದವರಲ್ಲ. ಬದಲಾಗಿ ಆಟವಾಡುವುದರ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರು. ತೃಪ್ತಿ ಅವರು ಬ್ಯಾಕ್ಬೆಂಚರ್ ಆಗಿದ್ದರಿಂದ ಅವರಿಗೆ ಯಾವ ಭಯವೂ ಇರಲಿಲ್ಲ. ಬದಲಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಮತ್ತು ಛಲ ಮಾತ್ರ ಅವರಿಗೆ ಇತ್ತು.
ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ ತೃಪ್ತಿ ಅವರು ಸಿದ್ಧತೆ ಆರಂಭಿಸಿದರು. ಆದರೆ ಸತತ ನಾಲ್ಕು ಬಾರಿ ಅವರು ವಿಫಲರಾದರು. ಆದರೆ ಪ್ರತಿ ಬಾರಿ ಪರೀಕ್ಷೆಯಲ್ಲಿ ವಿಫಲವಾದಾಗಲ ಅವರ ಸಂಕಲ್ಪ ಮತ್ತಷ್ಟು ಗಟ್ಟಿಯಾಗುತ್ತಿತ್ತು.
ನಾಲ್ಕನೇ ಬಾರಿ ಪರೀಕ್ಷೆಯಲ್ಲಿ ವಿಫಲರಾದ ನಂತರ ತೃಪ್ತಿ ಅವರು ತಮ್ಮ ಸಿದ್ಧತೆಯ ಶೈಲಿಯನ್ನು ಬದಲಿಸಿಕೊಂಡರು. ದೀರ್ಘಕಾಲದವರೆಗೆ ಓದುವ ಬದಲು, ಕಡಿಮೆ ಸಮಯವಾದರೂ ಗುಣಮಟ್ಟದ ಓದಿಗೆ ಒತ್ತು ನೀಡಿದರು. ವಿಷಯಗಳನ್ನು ಕೇವಲ ನೆನಪಿಟ್ಟುಕೊಳ್ಳುವ ಬದಲು, ಅವುಗಳನ್ನು ಆಳವಾಗಿ ಅರ್ಥಮಾಡಿಕೊಂಡು ಸ್ವಂತ ವಾಕ್ಯದಲ್ಲಿ ಬರೆಯುವುದನ್ನು ರೂಢಿಸಿಕೊಂಡರು. ಜೊತೆಗೆ ಸೋಷಿಯಲ್ ಮೀಡಿಯಾ ಮತ್ತು ಫೋನ್ಗಳಿಂದ ಸಂಪೂರ್ಣವಾಗಿ ದೂರವಿದ್ದರು.
ತಮ್ಮ ಐದನೇ ಪ್ರಯತ್ನದಲ್ಲಿ ತೃಪ್ತಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡರು.

































