ರಾಜಸ್ಥಾನ : ಮೋನಿಕಾ ಯಾದವ್ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ್ದಾರೆ. ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿ 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗುವ ಮೂಲಕ ಅವರು ತಮ್ಮ ಕುಟುಂಬಕ್ಕೆ ಕೀರ್ತಿ ತಂದರು. ಇದು ಮಾತ್ರವಲ್ಲದೆ ಲಕ್ಷಾಂತರ ಯುವಕರಿಗೆ ಸ್ಫೂರ್ತಿ ನೀಡಿದರು.
ಮೋನಿಕಾ ಯಾದವ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ಲಿಸಾದಿಯಾ ಗ್ರಾಮದವರು. ಹಿರಿಯ ಆರ್‌ಎಎಸ್ (ರಾಜಸ್ಥಾನ ಆಡಳಿತ ಸೇವೆ) ಅಧಿಕಾರಿ ಹರ್ಫೂಲ್ ಸಿಂಗ್ ಯಾದವ್ ಮತ್ತು ಗೃಹಿಣಿ ತಾಯಿ ಸುನೀತಾ ಯಾದವ್ ದಂಪತಿಗೆ ಜನಿಸಿದ ಮೋನಿಕಾ, ಮೂವರಲ್ಲಿ ಹಿರಿಯ ಮಗಳು.
ಬಾಲ್ಯದಿಂದಲೂ ತನ್ನ ಅಧ್ಯಯನದಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಿದ್ದರು. ನಾಗರಿಕ ಸೇವೆಯಲ್ಲಿನ ಅವರ ತಂದೆಯ ಆಸಕ್ತಿಯಿಂದಲೇ ಸ್ಫೂರ್ತಿ ಪಡೆದರು. 2017ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ತೇರ್ಗಡೆಯಾಗಿ, 403ನೇ ರ‍್ಯಾಂಕ್ ಗಳಿಸಿದರು. ಆಗ ಅವರಿಗೆ ಕೇವಲ 22 ವರ್ಷ. ಇದಲ್ಲದೆ ರಾಜಸ್ಥಾನ ನಾಗರಿಕ ಸೇವೆಗಳಲ್ಲಿ 93ನೇ ರ‍್ಯಾಂಕ್, ಎನ್‌ಇಟಿ, ಜೆಆರ್‌ಎಫ್, ಸಿಎ ಕಠಿಣ ಪರೀಕ್ಷೆಗಳಲ್ಲೂ ಉತ್ತೀರ್ಣರಾದರು.
ಲಕ್ನೋದ ಭಾರತೀಯ ರೈಲ್ವೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ 78 ವಾರಗಳ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಪಡೆದರು. ಬಳಿಕ ಅವರು ಬಲೋತ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆಗಿರುವ ಐಎಎಸ್ ಅಧಿಕಾರಿ ಸುಶೀಲ್ ಕುಮಾರ್ ಅವರನ್ನು ವಿವಾಹವಾದರು. ಬಲೋತ್ರಾ ಡಿಎಂ ಮತ್ತು ರಾಜಸ್ಥಾನ ಕೇಡರ್ ಐಎಎಸ್ ಅಧಿಕಾರಿಯಾದ ಸುಶೀಲ್ ಕುಮಾರ್ ಅವರು 2017ರ ಬ್ಯಾಚ್‌ಗೆ ಸೇರಿದವರಾಗಿದ್ದು, ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.

































