ಚೆನ್ನೈ: ಅಪಘಾತದ ಸಂದರ್ಭದಲ್ಲಿ ಚಾಲಕ ನಿಯಮಗಳನ್ನು ಗಾಳಿಗೆ ತೂರಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರೂ ಸಂತ್ರಸ್ತರಿಗೆ ವಿಮೆ ಪರಿಹಾರ ಪಾವತಿಸುವ ಹೊಣೆ ವಿಮಾ ಸಂಸ್ಥೆಯ ಮೇಲಿರುತ್ತದೆ. ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತ ಮಾಡಿರುವುದರಿಂದ ನಾವು ವಿಮೆ ಪಾವತಿಸಲು ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಚನ್ನೈ ಹೈಕೋರ್ಟ್ ತೀರ್ಪು ನೀಡಿದೆ.ನಡೆದು ಹೋಗುತ್ತಿದ್ದ ಪತಿಗೆ ವ್ಯಾನ್ ಹಿಂದಿನಿಂದ ಹೋಗಿ ಡಿಕ್ಕಿಹೊಡೆದಿದ್ದು ಅವರು ಸಾವನ್ನಪ್ಪಿದ್ದಾರೆ. ಹೀಗಾಗಿ ಹೆಚ್ಚಿನ ಪರಿಹಾರ ಕೊಡಿಸಬೇಕು ಎಂದು ಕೋರಿ ತಮಿಳುನಾಡಿನ ಭುವನೇಶ್ವರಿ ಹಾಗೂ ಕುಟುಂಬ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ದಂಡಪಾಣಿ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿರುವ ಡ್ರೈವರ್ ಇನ್ಸೂರೆನ್ಸ್ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ವಿಮೆ ಪಾವತಿಸದಿರಲು ಕಾರಣವಲ್ಲ. ಅಪಘಾತಕ್ಕೆ ಕಾರಣವಾದ ವಾಹನಕ್ಕೆ ವಿಮೆ ನೀಡಿರುವ ಸಂಸ್ಥೆ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆಯನ್ನು ಹೊರಬೇಕಾಗುತ್ತದೆ. ಚಾಲಕ ನಿಯಮಗಳನ್ನು ಗಾಳಿಗೆ ತೂರಿದ್ದರೆ ವಾಹನದ ಮಾಲಿಕ/ಚಾಲಕನಿಂದ ಪರಿಹಾರದ ಮೊತ್ತವನ್ನು ವಿಮಾ ಕಂಪನಿ ವಸೂಲಿ ಮಾಡಿಕೊಳ್ಳಬಹುದು ಎಂದು ಹಲವು ಪ್ರಕರಣಗಳಲ್ಲಿ ಹೇಳಲಾಗಿದೆ. ಮುಹಮ್ಮದ್ ರಶೀದ್ ಅಲಿಸಾಯ್ ರಶೀದ್ ವರ್ಸಸ್ ಗಿರಿವಾಸನ್ ಪ್ರಕರಣದಲ್ಲಿ ಅಪಘಾತದ ಸಂತ್ರಸ್ತರಾದ ಮೂರನೇ ವ್ಯಕ್ತಿಗೆ ಪರಿಹಾರ ನೀಡುವುದು ವಿಮಾ ಸಂಸ್ಥೆಯ ಜಬಾಬ್ದಾರಿ. ವಿಮೆ ಪಾಲಿಸಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು ಎಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಅಪಘಾತದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ವಿಮಾ ಸಂಸ್ಥೆ ಪಾವತಿಸಬೇಕು ಎಂದು ಹೇಳಿದೆ.ತಮಿಳುನಾಡಿನ ರಾಜಶೇಖರನ್ ಎಂಬುವರು ನಡೆದು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ವ್ಯಾನ್ ಡಿಕ್ಕಿ ಹೊಡೆದಿತ್ತು. ಅಪಘಾತದಿಂದ ರಾಜಶೇಖರನ್ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ನ್ಯಾಯಮಂಡಳಿ 27 ಲಕ್ಷ ಪರಿಹಾರ ಪಾವತಿಸುವಂತೆ ವಿಮಾ ಸಂಸ್ಥೆಗೆ ಆದೇಶಿಸಿತ್ತು. ಹೆಚ್ಚುವರಿ ಪರಿಹಾರ ಕೋರಿ ರಾಜಶೇಕರನ್ ಪತ್ನಿ ಹಾಗೂ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಪರಿಹಾರ ಮೊತ್ತವನ್ನು 30.25 ಲಕ್ಷಕ್ಕೆ ಹೆಚ್ಚಿಸಿದ್ದು, ಈ ಪರಿಹಾರ ಮೊತ್ತವನ್ನು ಶೇ.7.5 ಬಡ್ಡಿ ದರದೊಂದಿಗೆ 6 ವಾರಗಳಲ್ಲಿ ಸಂತ್ರಸ್ತರಿಗೆ ಪಾವತಿಸುವಂತೆ ತೀರ್ಪು ನೀಡಿದೆ. ಜತೆಗೆ ಈ ಪರಿಹಾರ ಮೊತ್ತವನ್ನು ವಿಮಾ ಸಂಸ್ಥೆ ಸಂಬಂಧಪಟ್ಟವರಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.C.M.A.No.3392 of 2024
