ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಏಳು ಆರೋಪಿಗಳ ಜಾಮೀನನ್ನು ರದ್ದು ಮಾಡಿತು.
ಏಳು ಮಂದಿ ಆರೋಪಿಗಳು ಮತ್ತೆ ಜೈಲು ಸೇರುವಂತಾಯ್ತು. ಜೈಲು ಸೇರಿದಾಗಿನಿಂದಲೂ ಪವಿತ್ರಾ, ದರ್ಶನ್ ಸೇರಿದಂತೆ ಇನ್ನೂ ಕೆಲವರು ಮತ್ತೆ ಜಾಮೀನು ಪಡೆಯುವ ಯತ್ನದಲ್ಲಿದ್ದಾರೆ ಆದರೆ ಸಾಧ್ಯವಾಗಿಲ್ಲ. ಇದೀಗ ಒಬ್ಬ ಆರೋಪಿಗೆ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಆಗಿರುವ ಪ್ರದೋಶ್ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಆದರೆ ಇದು ಕೇವಲ 20 ದಿನಗಳ ಜಾಮೀನು ಆಗಿರಲಿದೆ. ಆರೋಪಿ ಪ್ರದೋಶ್ ಅವರ ತಂದೆ ಇತ್ತೀಚೆಗಷ್ಟೆ ನಿಧನ ಹೊಂದಿದ್ದು, ಅವರ ಉತ್ತರಾಧಿ ಕ್ರಿಯೆಗಳನ್ನು ನೆರವೇರಿಸಲು ಪ್ರದೋಶ್ಗೆ ಜಾಮೀನು ನೀಡಬೇಕೆಂದು ಬೆಂಗಳೂರಿನ 57 ಸಿಸಿಹೆಚ್ ಕೋರ್ಟ್ಗೆ ಅರ್ಜಿ ಹಾಕಲಾಗಿತ್ತು. ನ್ಯಾಯಾಲಯವು ಮಾನವೀಯ ನೆಲೆಗಟ್ಟಿನಲ್ಲಿ 20 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.































