ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೈಯದ್ ಯಾಸಿನ್‌ನ ಬ್ಯಾಂಕ್ ಖಾತೆಯಲ್ಲಿದ್ದ 29 ಸಾವಿರ ರೂಪಾಯಿ ಹಣವನ್ನು ಜಾರಿ ನಿರ್ದೇಶನಾಲಯವು(ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಮುಟ್ಟುಗೋಲು ಹಾಕಿಕೊಂಡಿದೆ.
ಮತ್ತೊಂದೆಡೆ ಶಂಕಿತ ಉಗ್ರರು ಧರ್ಮಸ್ಥಳ ದೇವಾಲಯದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರವನ್ನ ಇ.ಡಿ. ಬಯಲಿಗೆಳೆದಿದೆ. ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಈ ಬಾಂಬ್ ಅನ್ನು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯದಲ್ಲಿ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದ. ಬಾಂಬ್ ಟೈಮರ್ ಅನ್ನು 90 ನಿಮಿಷಗಳ ಬದಲು 9 ಸೆಕೆಂಡ್‌ಗೆ ನಿಗದಿ ಮಾಡಿದ್ದ ಪರಿಣಾಮ ಅದು ಮಾರ್ಗ ಮಧ್ಯೆಯೇ ಆಟೋರಿಕ್ಷಾದೊಳಗೆ ಸ್ಫೋಟವಾಗಿತ್ತು. ಐಸಿಸ್ ಆನ್‌ಲೈನ್ ಹ್ಯಾಂಡ್ಲರ್ ಕರ್ನಲ್ ಕಳುಹಿಸುತ್ತಿದ್ದ ಹಣವನ್ನು ಆರೋಪಿ ಮೊಹಮ್ಮದ್ ಶಾರೀಕ್ ಸ್ವೀಕರಿಸಲು ಮತ್ತೊಬ್ಬ ಆರೋಪಿ ಮಾಜ್ ಮುನೀರ್ ಈ ಅನಧಿಕೃತ ಬ್ಯಾಂಕ್ ಖಾತೆಗಳ ಮಾಹಿತಿ ನೀಡುತ್ತಿದ್ದ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ. ತಿಳಿಸಿದೆ.
ಐಸಿಸ್ ಆನ್‌ಲೈನ್ ಹ್ಯಾಂಡ್ಲರ್ ‘ಕರ್ನಲ್’ ಎಂಬಾತ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅಲಿಯಾಸ್ ಪ್ರೇಮ್ ರಾಜ್ ಮತ್ತು ಇತರ ಆರೋಪಿಗಳಿಗೆ ವಿಕರ್ ಆ್ಯಪ್/ಟೆಲಿಗ್ರಾಮ್ ಇತ್ಯಾದಿ ಆ್ಯಪ್‌ಗಳ ಮುಖಾಂತರ ಸುಧಾರಿತ ಸ್ಫೋಟಕ ಸಾಧನ(ಐಇಡಿ) ತಯಾರಿಸಲು ತರಬೇತಿ ನೀಡಿರುವುದು ಮತ್ತು ಆರೋಪಿಗಳಿಗೆ ಅನಧಿಕೃತ ಬ್ಯಾಂಕ್ ಖಾತೆ ಮತ್ತು ಕ್ರಿಪ್ಟೋ ಕರೆನ್ಸಿಗಳ ಮುಖಾಂತರ ಹಣಕಾಸು ನೆರವು ನೀಡಿರುವುದು ಬೆಳಕಿಗೆ ಬಂದಿತ್ತು.
ಈ ಹಣವನ್ನು ಪ್ರಮುಖ ಆರೋಪಿಗಳಾದ ಸೈಯದ್ ಯಾಸಿನ್ ಮತ್ತು ಮೊಹಮ್ಮದ್ ಶಾರಿಕ್ ಪಾಯಿಂಟ್ ಆಫ್ ಸೇಲ್(ಪಿಒಎಸ್) ಏಜೆಂಟ್‌ಗಳಿಗೆ ಕಮಿಷನ್ ನೀಡಿ ನಗದು ರೂಪದಲ್ಲಿ ಹಣ ಪಡೆಯುತ್ತಿದ್ದರು. ಈ ರೀತಿ ಆರೋಪಿಗಳಿಗೆ ಸುಮಾರು 2.86 ಲಕ್ಷ ರೂ. ಹಣ ರವಾನೆಯಾಗಿತ್ತು. ಈ ಹಣವನ್ನು ಆರೋಪಿಗಳು ಐಇಡಿ ಬಾಂಬ್ ತಯಾರಿಸಲು ಆನ್‌ಲೈನ್‌ಲ್ಲಿ ವಸ್ತುಗಳ ಖರೀದಿ, ಮೈಸೂರು ನಗರ ಮತ್ತು ಇತರ ಸ್ಥಳಗಳಲ್ಲಿ ಮನೆ ಬಾಡಿಗೆ ಪಡೆಯಲು ಹಾಗೂ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಸಂಬಂಧ ಸಮೀಕ್ಷೆಗೆ ಬಳಸಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಆಟೋರಿಕ್ಷಾದಲ್ಲಿ ಬಾಂಬ್ ಸ್ಫೋಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ಮೊಹಮ್ಮದ್ ಶಾರಿಕ್‌ನ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದ 39 ಸಾವಿರ ರು. ಹಣವನ್ನು ಎನ್‌ಐಎ ಜಪ್ತಿ ಮಾಡಿದೆ. ಈ ಪ್ರಕರಣದ ಬಂಧಿತರಾಗಿರುವ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶಾರಿಕ್, ಸೈಯದ್ ಯಾಸಿನ್, ಮಾಜ್ ಮುನೀರ್ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಮುಂದುವರೆದಿದೆ ಎಂದು ಇ.ಡಿ. ತಿಳಿಸಿದೆ.
ಮಂಗಳೂರು ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರ ನ.19ರಂದು ಸಂಜೆ ಸುಮಾರು 4.40ಕ್ಕೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿತ್ತು. ಈ ಸಂಬಂಧ ಆಟೋ ಚಾಲಕ ಕೆ.ಪುರುಷೋತ್ತಮ ನೀಡಿದ ದೂರಿನ ಮೇರೆಗೆ ಕಂಕನಾಡಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಸ್ಫೋಟದ ಉಗ್ರ ಸಂಘಟನೆ ಕೈವಾಡ ಕಂಡು ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಇ.ಡಿ. ಸಹ ಪಿಎಂಎಲ್ಎ ಕಾಯ್ದೆಯಡಿ ಇಸಿಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.