ಮುಂಬೈ: IPL 2025 ಆರಂಭಕ್ಕೆ ಇನ್ನು ಒಂದು ತಿಂಗಳು ಬಾಕಿ ಉಳಿದಿದೆ. ಗುರುವಾರ (ಫೆ.13) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ನೂತನ ಆಯ್ಕೆ ಘೋಷಣೆ ಮಾಡಿದ್ದು, ಐಪಿಎಲ್ ಕಾವು ಆರಂಭವಾಗಿದೆ.
ಇದೀಗ ಐಪಿಎಲ್ ಕುರಿತಾಗಿ ಮಹತ್ವದ ಅಪ್ಡೇಟ್ ಬಂದಿದೆ. ಕ್ರಿಕ್ ಬಜ್ ವರದಿ ಪ್ರಕಾರ ಐಪಿಎಲ್ 2025ರ ಸೀಸನ್ ಮಾರ್ಚ್ 22ರಂದು ಕೋಲ್ಕತ್ತಾದಲ್ಲಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೊದಲ ಮುಖಾಮುಖಿ ನಡೆಯಲಿದೆ.
ಕಳೆದ ವರ್ಷದ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 23 ರಂದು ಹೈದರಾಬಾದ್ ನ ಉಪ್ಪಲ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ವರದಿಯ ಪ್ರಕಾರ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಮೇ 25ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿದೆ.
ಅಹಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು, ಲಕ್ನೋ, ಮುಲ್ಲನ್‌ಪುರ, ದೆಹಲಿ, ಜೈಪುರ, ಕೋಲ್ಕತ್ತಾ ಮತ್ತು ಹೈದರಾಬಾದ್‌ಗಳ 10 ತವರು ಕೇಂದ್ರಗಳಲ್ಲದೆ, ಗುವಾಹಟಿ ಮತ್ತು ಧರ್ಮಶಾಲಾ ಕೂಡ ಪಂದ್ಯಗಳನ್ನು ಆಯೋಜಿಸಲಿವೆ ಎಂದು ವರದಿ ಹೇಳಿದೆ. ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ತನ್ನ ಎರಡು ತವರು ಪಂದ್ಯಗಳನ್ನು ಆಡಲಿದ್ದು, ಪಂಜಾಬ್ ಕಿಂಗ್ಸ್ ತಂಡವು ತನ್ನ ಎರಡು ತವರು ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲಿದೆ.