ಡೆಹ್ರಾಡೂನ್ : ಯುಪಿಎಸ್‌ಸಿ ಪರೀಕ್ಷೆ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಬರೆದು ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಯಾಗಬೇಕೆನ್ನುವುದು ಹಲವು ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಉತ್ತಮ ಸಂಬಳ ಬರುತ್ತಿದ್ದ ಕೆಲಸವನ್ನು ತೊರೆದು, ವಿದೇಶದಿಂದ ಭಾರತಕ್ಕೆ ಮರಳಿ, ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಅಂಜಲಿ ವಿಶ್ವಕರ್ಮ ಅವರ ಯಶೋಗಾಥೆ ಇದು.
ಅಂಜಲಿ ವಿಶ್ವಕರ್ಮ ಅವರು ಉತ್ತರಾಖಂಡದ ಡೆಹ್ರಾಡೂನ್‌ನ ಸರಳ ಮತ್ತು ಸಾಧಾರಣ ಕುಟುಂಬದಲ್ಲಿ ಜನಿಸಿದವರು. ಶೈಕ್ಷಣಿಕವಾಗಿ ಉತ್ತಮವಾಗಿದ್ದ ಅವರು, 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಶಾಲಾ ಶಿಕ್ಷಣದ ನಂತರ, ಅವರು ಪ್ರತಿಷ್ಠಿತ ಐಐಟಿ ಕಾನ್ಪುರದಿಂದ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದರು.
ಅಂಜಲಿ ಅವರ ವೃತ್ತಿಜೀವನವು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಾರಂಭವಾಯಿತು. ಶೀಘ್ರದಲ್ಲೇ ಅವರಿಗೆ ಅಂತರರಾಷ್ಟ್ರೀಯ ಕಂಪನಿಗಳಿಂದ ಉದ್ಯೋಗಾವಕಾಶಗಳು ಬಂದವು. ಕಳೆದ ಕೆಲವು ವರ್ಷಗಳಲ್ಲಿ, ಅವರು ನ್ಯೂಜಿಲೆಂಡ್ ಸೇರಿದಂತೆ ಆರು ವಿವಿಧ ದೇಶಗಳಲ್ಲಿ ಕೆಲಸ ಮಾಡಿದರು. ಅಲ್ಲಿ ಅವರು ವರ್ಷಕ್ಕೆ ಸುಮಾರು 48 ಲಕ್ಷ ರೂ. ಗಳಿಸುವ ಉತ್ತಮ ಸಂಬಳದ ಹುದ್ದೆಯಲ್ಲಿದ್ದರು. ವಿದೇಶದಲ್ಲಿ ಇಂತಹ ಯಶಸ್ವಿ ಜೀವನ ನಡೆಸುತ್ತಿದ್ದರೂ, ಅಂಜಲಿ ಅವರಿಗೆ ತಮ್ಮ ದೇಶಕ್ಕೆ ಸೇವೆ ಸಲ್ಲಿಸುವ ಹಂಬಲವಿತ್ತು.
ಹೀಗಾಗಿ ಅಂಜಲಿ ಅವರು ತಮ್ಮ ಉದ್ಯೋಗವನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾಗಲು ಭಾರತಕ್ಕೆ ಮರಳಲು ನಿರ್ಧರಿಸಿದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಮತ್ತೆ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.
ಅದರಂತೆ ಅಂತಿಮವಾಗಿ, 2020 ರಲ್ಲಿ, ಅಂಜಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಸೇವೆಗೆ (ಐಪಿಎಸ್) ಆಯ್ಕೆಯಾದರು. ಪ್ರಸ್ತುತ, ಅಂಜಲಿ ವಿಶ್ವಕರ್ಮ ಕಾನ್ಪುರ ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾಗಿ (ADCP) ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಬಾಬೂಪುರ್ವಾದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ (ACP) ಮತ್ತು ಕಾನ್ಪುರದ ಸೈಬರ್ ಕ್ರೈಮ್ ಯುನಿಟ್‌ನಲ್ಲಿ ಸೇವೆ ಸಲ್ಲಿಸಿದ್ದರು.