ಛತ್ತೀಸ್‌ಗಢ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗಲು ದೃಢ ಸಂಕಲ್ಪ, ಛಲ, ಭರವಸೆ ಮುಖ್ಯ. ಹೀಗೆ ತನ್ನ ಎರಡೂ ಪ್ರಯತ್ನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರೂ ಭರವಸೆ ಕಳೆದುಕೊಳ್ಳದೇ ತನ್ನ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರ ಯಶೋಗಾಥೆ ಇದು.
ಅಂಕಿತಾ ಶರ್ಮಾ ಅವರು ಛತ್ತೀಸ್‌ಗಢದ ದುರ್ಗ್‌ನಲ್ಲಿ ಜನಿಸಿದರು. ಅವರ ತಂದೆ ರಾಕೇಶ್ ಶರ್ಮಾ ಒಬ್ಬ ವ್ಯಾಪಾರಿ ಮತ್ತು ಅವರ ತಾಯಿ ಸವಿತಾ ಶರ್ಮಾ ಗೃಹಿಣಿ. ಅಂಕಿತಾ ಅವರು ದುರ್ಗ್ನ ಸೇಂಟ್ ಕ್ಸೇವಿಯರ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು 10ನೇ ತರಗತಿಯಲ್ಲಿ ಶೇ. 92 ಮತ್ತು 12ನೇ ತರಗತಿಯಲ್ಲಿ ಶೇ. 90 ಅಂಕಗಳನ್ನು ಗಳಿಸಿದರು.
ಅಂಕಿತಾ ಅವರು ಛತ್ತೀಸ್‌ಗಢದಲ್ಲಿಯೇ ತಮ್ಮ ಪದವಿ ಶಿಕ್ಷಣವನ್ನು ಸಹ ಮಾಡಿದರು. ನಂತರ ಅಂಕಿತಾ ಅವರು ಭಿಲೈಯಲ್ಲಿರುವ ಛತ್ತೀಸ್‌ಗಢ ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ವ್ಯಾಸಂಗ ಮಾಡಿದರು. ಅಲ್ಲಿ ಅವರು ಚಿನ್ನದ ಪದಕ ಗಳಿಸಿದರು.
ಅಂಕಿತಾ ಅವರು ಎಂ.ಬಿ.ಎ ವ್ಯಾಸಂಗ ಮಾಡುತ್ತಿರುವಾಗ ಅವರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲ ಮೂಡಿತು. ನಂತರ ಯುಪಿಎಸ್‌ಸಿಗೆ ತಯಾರಿ ಪ್ರಾರಂಭಿಸಲು ಅವರು ದೆಹಲಿಗೆ ತೆರಳಿದರು. ಆದರೆ, ಕೆಲ ಕಾರಣಗಳಿಂದಾಗಿ, ಅವರು ಛತ್ತೀಸ್‌ಗಢಕ್ಕೆ ಹಿಂತಿರುಗಿದರು ಮತ್ತು ತಮ್ಮ ಸ್ವಂತ ಪಟ್ಟಣದಲ್ಲಿ ಅಧ್ಯಯನ ಮಾಡಿದರು.
ಅಂಕಿತಾ ಅವರು ಐಚ್ಛಿಕ ವಿಷಯವಾಗಿ ಸಾರ್ವಜನಿಕ ಆಡಳಿತ (ಪಬ್ಲಿಕ್ ಅಡ್ಮಿನಿಸ್ಟ್ರೇಷನ್) ಆಯ್ಕೆ ಮಾಡಿಕೊಂಡಿದ್ದರು. ಅಂಕಿತಾ ಅವರು ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. ಆದರೆ ಅಂಕಿತಾ ಅವರು ಭರವಸೆ ಕಳೆದುಕೊಳ್ಳಲಿಲ್ಲ.
ಅಂಕಿತಾ ಅವರು 2018ರಲ್ಲಿ ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದರು. ತಮ್ಮ ಮೂರನೇ ಪ್ರಯತ್ನದಲ್ಲಿ 203 ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಯಶಸ್ವಿಯಾದರು. ಬಳಿಕ ಅವರು ಛತ್ತೀಸ್‌ಗಢ ಕೇಡರ್‌ಗೆ ಸೇರಿದರು.
ಪ್ರಸ್ತುತ ಅಂಕಿತಾ ಶರ್ಮಾ ಅವರು ಖೈರಾಗಢ-ಛೂಯಿಖದಾನ್-ಗಂಡೈ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಕ್ಸಲರ ವಿರುದ್ಧ ಯಶಸ್ವಿ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದಕ್ಕಾಗಿ ಅವರಿಗೆ ಇಂದ್ರ ಭೂಷಣ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿದೆ.