ರಾಜಸ್ಥಾನ : ಯುಪಿಎಸ್‌ಸಿ ಭಾರತದ ಅತ್ಯಂತ ಕಠಿಣ ನೇಮಕಾತಿ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುತ್ತಾರೆ. ಹೀಗೆ ಅಡೆತಡೆಗಳನ್ನು ಮೆಟ್ಟಿನಿಂತು ಯುಪಿಎಸ್‌ಸಿಯಲ್ಲಿ ಯಶಸ್ಸು ಸಾಧಿಸಿದ ಐಪಿಎಸ್ ಅಧಿಕಾರಿ ಈಶ್ವರ್ ಗುರ್ಜರ್ ಸ್ಫೂರ್ತಿದಾಯಕ ಕತೆ ಇದು.
ರಾಜಸ್ಥಾನದ ಭಿಲ್ವಾರಾದ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಈಶ್ವರ್ ಲಾಲ್ ಗುರ್ಜರ್, ದಿನಸಿ ಅಂಗಡಿಯ ವ್ಯಾಪಾರಿ ಸುವಾಲಾಲ್ ಗುರ್ಜರ್ ಮತ್ತು ಗೃಹಿಣಿ ಸುಖಿ ದೇವಿ ದಂಪತಿಯ ಪುತ್ರ. ಈಶ್ವರ್ ಅವರು 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ನಿರುತ್ಸಾಹಗೊಂಡು ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸುವ ಆಲೋಚಿಸಿದ್ದರು.
ಬಳಿಕ ಈಶ್ವರ್ ಅವರು ಉತ್ತಮ ಸಾಧನೆ ಮಾಡುವ ಬಯಕೆಯಿಂದ, ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. 2019ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗಲು ವಿಫಲರಾದರು. ಬಳಿಕ 2020ರಲ್ಲಿ ಎರಡನೇ ಬಾರಿಗೆ ಹಾಗೂ 2021ರಲ್ಲಿ ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಿನ್ನಡೆ ಎದುರಿಸಿದರು.
ನಂತರ 2022ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಈಶ್ವರ್ ಅವರು 644ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಯಶಸ್ವಿಯಾದರು. ಈ ಮೂಲಕ ಅವರಿಗೆ ಐಆರ್‌ಎಸ್ ಕೇಡರ್ ದೊರಕಿತು.
ಆದರೆ, ಐಪಿಎಸ್ ಸೇರಲು ಬಯಸಿದ್ದ ಈಶ್ವರ್ ಗುರ್ಜರ್, 2023ರಲ್ಲಿ ಐದನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು 555 ನೇ ರ‍್ಯಾಂಕ್ ಗಳಿಸುತ್ತಾರೆ. ನಂತರ 2024ರಲ್ಲಿ ಈಶ್ವರ್ ಅವರು ಯುಪಿಎಸ್‌ಸಿ ಪರೀಕ್ಷೆ ಬರೆದು 483ನೇ ರ‍್ಯಾಂಕ್ ಗಳಿಸುತ್ತಾರೆ. ಈ ಮೂಲಕ ಈಶ್ವರ್ ಅವರು ಸತತ ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಯಾಗಿದ್ದಾರೆ.
ಸದ್ಯ ಈಶ್ವರ ಗುರ್ಜರ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು 2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 483ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಭಾರತೀಯ ಪೊಲೀಸ್ ಸೇವೆಗೆ ಅರ್ಹತೆ ಗಳಿಸಿದ್ದಾರೆ.