ಮಧ್ಯಪ್ರದೇಶ : ಯುಪಿಎಸ್‌ಸಿ ಪರೀಕ್ಷೆ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಆದರೆ ಕಠಿಣ ಪರಿಶ್ರಮ, ಛಲದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾದ ನೇಹಾ ಜೈನ್ ಅವರ ಯಶೋಗಾಥೆ ಇದು.
ನೇಹಾ ಜೈನ್ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಮೊರ್ವಾದವರು. ಅವರು ತಮ್ಮ ಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಪೂರ್ಣಗೊಳಿಸಿದರು. ಆದರೆ ನಂತರ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದರು. ಅವರು ದೆಹಲಿಯಿಂದ ಸ್ನಾತಕ ಪದವಿ ಪಡೆದರು ಮತ್ತು ಪದವಿ ಪೂರ್ಣಗೊಂಡ ಕೂಡಲೇ ಐಟಿ ಉದ್ಯೋಗವನ್ನು ಪಡೆದರು.
ಐಟಿ ಉದ್ಯೋಗದಲ್ಲಿ ಮುಂದುವರೆಯುವುದು ನೇಹಾ ಅವರಿಗೆ ಇಷ್ಟವಿರಲಿಲ್ಲ. ಐಎಎಸ್ ಅಧಿಕಾರಿಯಾಗಿರುವ ತಮ್ಮ ಸಹೋದರ ಹಿಮಾಂಶು ಜೈನ್ ಅವರಿಂದ ಪ್ರೇರಿತರಾಗಿ, ದೇಶ ಸೇವೆ ಮಾಡುವ ಮತ್ತು ಗೌರವಾನ್ವಿತ ಜೀವನ ನಡೆಸಬೇಕೆಂಬ ಕನಸು ಕಂಡರು.
ನೇಹಾ ಅವರು ಐಟಿ ಉದ್ಯೋಗವನ್ನು ಮುಂದುವರೆಸುತ್ತಲೇ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು. ಅವರು ಕೆಲಸದ ನಂತರದ ಸಮಯದಲ್ಲಿ ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿದ್ದರು. ಸ್ವಯಂ ಅಧ್ಯಯನದ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದು ದೃಢ ಸಂಕಲ್ಪ ಮಾಡಿದ್ದರು. ಹೀಗಾಗಿ ಯಾವುದೇ ತರಬೇತಿ ಕೇಂದ್ರಗಳಿಗೆ ತೆರಳಲಿಲ್ಲ.
ಕಠಿಣ ಅಧ್ಯಯನ ಮಾಡಿದ ನಂತರವೂ, ನೇಹಾ ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಪರೀಕ್ಷೆಯನ್ನು ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರು ಧೃತಿಗೆಡದೆ ಮೂರನೇ ಬಾರಿಗೆ 2021ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 152 ಭಾರತೀಯ ರ‍್ಯಾಂಕ್ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಪಿಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.