ಉತ್ತರಪ್ರದೇಶ : ಒಮ್ಮೊಮ್ಮೆ ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ಬಹಳ ತ್ಯಾಗ ಮಾಡಬೇಕಾಗುತ್ತದೆ. ಈ ರೀತಿ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ತನ್ನ ವೃತ್ತಿಯನ್ನು ತ್ಯಾಗ ಮಾಡಿದ ಶಾ ಬುಶ್ರಾ ಅವರ ಯಶೋಗಾಥೆ ಇದು.
ಶಾ ಬುಶ್ರಾ ಅವರು ಉತ್ತರ ಪ್ರದೇಶದ ಕನ್ನೌಜ್ ಮೂಲದವರು. ಅವರು ತಮ್ಮ ಪತಿ ಮತ್ತು ಮಗುವಿನೊಂದಿಗೆ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದರು. ಸೌದಿ ಅರೇಬಿಯಾದ ವಿಶ್ವವಿದ್ಯಾಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಪತಿ ಕೂಡ ಅಲ್ಲಿ ಉತ್ತಮ ಉದ್ಯೋಗದಲ್ಲಿದ್ದರು.
ಬುಶ್ರಾ ಅವರಿಗೆ ಐಪಿಎಸ್ ಅಧಿಕಾರಿಯಾಗಬೇಕೆಂಬ ಕನಸಿತ್ತು. ಉತ್ತಮ ಉದ್ಯೋಗದ ಹೊರತಾಗಿಯೂ ತಮ್ಮ ಕನಸನ್ನು ಕೈಬಿಡಲಿಲ್ಲ. ಅವರ ಪತಿ ಅವರ ಕನಸನ್ನು ನನಸಾಗಿಸಲು ಬೆಂಬಲಿಸಿದರು ಮತ್ತು ಇಬ್ಬರೂ ಭಾರತಕ್ಕೆ ಮರಳಿದರು.
2016 ರಲ್ಲಿ ಭಾರತಕ್ಕೆ ಮರಳಿದ ನಂತರ ಬುಶ್ರಾ ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ, ‘ತಾಯಿಯಾದ ಬಳಿಕ ಇತರ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಾಯಿಯಾದ ಬಳಿಕ ಹೆಚ್ಚು ಓದುವ ಅಗತ್ಯವಿಲ್ಲ’ ಎಂಬ ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಇದಕ್ಕೆಲ್ಲಾ ಜಗ್ಗದ ಶಾ ಬುಶ್ರಾ ಅವರು ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಾ ತಮ್ಮ ಸ್ವಂತ ಊರಾದ ಕನ್ನೌಜ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು.
ಬುಶ್ರಾ ಅವರು 2018 ರಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದರು. ಆ ಸಮಯದಲ್ಲಿ ಇಬ್ಬರು ಮಕ್ಕಳ ಜವಾಬ್ದಾರಿ ಇರುವಾಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಸಾಧ್ಯವೆಂದು ಜನರು ಹೇಳಿದರು. ಆದರೆ ಅವೆಲ್ಲಾ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ, ಆ ವರ್ಷ ತಮ್ಮ ಮೊದಲ ಪ್ರಯತ್ನದಲ್ಲಿಯೇ 277 ನೇ ಅಖಿಲ ಭಾರತ ರ‍್ಯಾಂಕ್‌ನೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಇಷ್ಟಕ್ಕೇ ತನ್ನ ಪ್ರಯತ್ನವನ್ನ ಕೈಬಿಡದ ಅವರು ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು, 234 ನೇ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗುತ್ತಾರೆ.