ಢಾಕಾ: ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಪರ ವಕೀಲ, ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಹಿಂದೂ ಸಂಘಟನೆ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರು. ಸನಾತನ ಜಾಗೋರಣ್ ಮಂಚದ ವಕ್ತಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅನುಯಾಯಿಗಳು ಅವರನ್ನು “ಚಿನ್ಮೊಯ್ ಪ್ರಭು” ಎಂದು ಕರೆಯುತ್ತಾರೆ.
ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಾಂಗ್ಲಾದೇಶ ಸನಾತನ ಜಾಗೋರನ್ ಮಂಚದ ವಕ್ತಾರರು ಮತ್ತು ಪುಂಡರೀಕ್ ಧಾಮ್‌ನ ಪ್ರಾಂಶುಪಾಲರು. ಬಾಂಗ್ಲಾದೇಶ ಪೊಲೀಸರ ವಿಶೇಷ ಗುಪ್ತಚರ ಡಿಟೆಕ್ಟಿವ್ ಬ್ರಾಂಚ್ (ಡಿಬಿ) ಸೋಮವಾರ ಮಧ್ಯಾಹ್ನ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದೆ.
ಇಸ್ಕಾನ್ ನಾಯಕ ಬ್ರಹ್ಮಚಾರಿ ಅವರು ಢಾಕಾದಿಂದ ಚಟ್ಟೋಗ್ರಾಮ್‌ಗೆ ಹೋಗಲು ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಚ್‌ಎಸ್‌ಐಎ) ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಅವರನ್ನು ಅಲ್ಲಿಂದ ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆದರೆ ಇವರ ಬಂಧನ ಬಗ್ಗೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಆದರೆ ಬಾಂಗ್ಲಾದೇಶ ರಾಜಧಾನಿಯಲ್ಲಿ ಹಿಂದೂಗಳನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಸ್ಕಾನ್ ಕಾರ್ಯದರ್ಶಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಲಾಗಿದೆ. ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ನಿರಂತರವಾಗಿ ರ‍್ಯಾಲಿಗಳನ್ನು ಆಯೋಜಿಸುವ ಮೂಲಕ ಚಿನ್ಮೋಯ್ ದಾಸ್ ಸಕ್ರಿಯರಾಗಿದ್ದರು. ಅವರ ಮೇಲೆ ರಾಷ್ಟ್ರಧ್ವಜ ಅಪಮಾನ ಮಾಡಿದ ಪ್ರಕರಣ ದಾಖಲಿಸಲಾಗಿತ್ತು, ಇದೀಗ ಬಂಧಿಸಿದ್ದಾರೆ.