ಜೆರುಸಲೇಂ : ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಘೋಷಿಸಿದ ಕೆಲವೇ ಗಂಟೆಗಳ ಬೆನ್ನಲ್ಲೇ ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ ಎಂದು ಪ್ಯಾಲೇಸ್ಟಿನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಜಾದಲ್ಲಿ 15 ತಿಂಗಳ ಸಂಘರ್ಷದ ಬಳಿಕ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದ ಆಗಿದೆ ಎಂದು ಅಮೆರಿಕ ಮತ್ತು ಕತಾರ್ ಘೋಷಿಸಿತ್ತು.
ಈ ಒಪ್ಪಂದವು 6 ವಾರಗಳ ಆರಂಭಿಕ ಕದನ ವಿರಾಮದ ರೂಪುರೇಷೆಗಳನ್ನು ಒಳಗೊಂಡಿರುತ್ತದೆ. ಈ ಒಪ್ಪಂದದ ಪ್ರಕಾರ ಗಾಜಾ ಪಟ್ಟಿಯಿಂದ ಇಸ್ರೇಲಿ ಪಡೆಗಳನ್ನು ಕ್ರಮೇಣ ಹಿಂತೆಗೆದುಕೊಳ್ಳುವುದು ಸೇರಿದಂತೆ ಇಸ್ರೇಲ್ ವಶದಲ್ಲಿರುವ ಪ್ಯಾಲೇಸ್ಟಿನ್ ಕೈದಿಗಳಿಗೆ ಬದಲಾಗಿ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುಬೇಕು.
ಕದನ ವಿರಾಮ ಭಾನುವಾರದಿಂದ ಜಾರಿಗೆ ಬರಲಿದೆ. ಸಂಧಾನಕಾರರು ಇಸ್ರೇಲ್ ಮತ್ತು ಹಮಾಸ್ ಜೊತೆ ಒಪ್ಪಂದವನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಕತಾರ್ ಪ್ರಧಾನಿ ಹೇಳಿದ್ದರು. ಇದರೊಂದಿಗೆ 15 ತಿಂಗಳುಗಳಿಗಿಂತ ಹೆಚ್ಚು ಕಾಲ ಸೆರೆಯಲ್ಲಿದ್ದ ಒತ್ತೆಯಾಳುಗಳನ್ನು ಅವರ ಕುಟುಂಬಗಳೊಂದಿಗೆ ಸೇರಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದರು.
ಇನ್ನು ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಪ್ಯಾಲೇಸ್ಟಿನಿಯನ್ನರು ಬೀದಿಗಿಳಿದು ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟಿದ್ದಾರೆ. ಜೊತೆಗೆ ಜೋರಾಗಿ ಕಾರಿನ ಹಾರ್ನ್ ಮಾಡುತ್ತಾ ಖುಷಿಪಟ್ಟಿದ್ದಾರೆ.