ಜೆರುಸಲೇಂ: ಕಳೆದ ಎರಡು ತಿಂಗಳ ಕದನ ವಿರಾಮ ಮುರಿದು, ಮಂಗಳವಾರ ಇಸ್ರೇಲ್ ಸೇನೆ ಗಾಜಾದ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 85 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ನೆಲದ ಮೇಲಿನ ಕಾರ್ಯಾಚರಣೆಯನ್ನು ಗುರುವಾರ ಇಸ್ರೇಲ್ ಸೇನೆ ಮುಂದುವರಿಸಿದ್ದು, ಗಾಜಾದ ಉತ್ತರ ಭಾಗದಲ್ಲಿ ಭಾರಿ ಗಡಿಬಿಡಿ ನಿರ್ಮಾಣವಾಗಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ವಿಶ್ವಸಂಸ್ಥೆಯ ಆವರಣದಲ್ಲಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆ. ಇತ್ತ, ಹಮಾಸ್‌ನ ಸಶಸ್ತ್ರ ಗುಂಪು ಮಧ್ಯ ಇಸ್ರೇಲ್‌ನ ಟೆಲ್ ಅವೀವ್ ಮೇಲೆ ರಾಕೆಟ್ ದಾಳಿ ನಡೆಸಿದೆ.
ಮಂಗಳವಾರದ ದಾಳಿಯಲ್ಲಿ ಹಮಾಸ್‌ನ ನಾಲ್ವರು ಪ್ರಮುಖ ನಾಯಕರು ಸೇರಿ 504 ಮಂದಿ ಸಾವನ್ನಪ್ಪಿದ್ದು, 190 ಮಕ್ಕಳು ಸೇರಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಆಡಳಿತ ಮಾಹಿತಿ ನೀಡಿದೆ.
ಭಾರತದ ಕಳವಳ
ಭಾರತ ಗಾಜಾದ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ಪ್ಯಾಲೆಸ್ತೀನಿಯ ಜನರಿಗೆ ಮಾನವೀಯ ನೆರವು ನೀಡುವಂತೆ ಒತ್ತಾಯಿಸಿದೆ. ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಅಗತ್ಯವಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಕದನ ವಿರಾಮದ ಪ್ರಯತ್ನ
ಕತಾರ್ ಮತ್ತು ಈಜಿಪ್ಟ್ ಮಧ್ಯವರ್ತಿಯಾಗಿ ಗಾಜಾ ಕದನ ವಿರಾಮದ ಒಪ್ಪಂದದ ಮೂರು ಹಂತಗಳನ್ನು ಜಾರಿಗೆ ತರಲು ಒತ್ತಾಯಿಸಿವೆ.