ಟೆಲ್ ಅವಿವ್ : ಗಾಜಾದ ನಾಸರ್ ಆಸ್ಪತ್ರೆಯ ಆವರಣದೊಳಗೆ ಹಮಾಸ್ ಮುಖಂಡನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಘೋಷಣೆ ಮಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಐಡಿಎಫ್, ಗಾಜಾದ ನಾಸರ್ ಆಸ್ಪತ್ರೆ ಆವರಣದೊಳಗಿಂದ ಕಾರ್ಯಾಚರಣೆ ನಡೆಸುತ್ತಿದ್ದ ಹಮಾಸ್ನ ಪ್ರಮುಖ ಭಯೋತ್ಪಾದಕನನ್ನು ನಿಖರ ದಾಳಿಯಲ್ಲಿ ಹೊಡೆದುರುಳಿಸಲಾಗಿದೆ. ವ್ಯಾಪಕ ಗುಪ್ತಚರ ಮಾಹಿತಿ ಸಂಗ್ರಹಣಾ ಪ್ರಕ್ರಿಯೆಯ ನಂತರ ಸಾಧ್ಯವಾದಷ್ಟು ಸುತ್ತಮುತ್ತಲಿನ ಪರಿಸರದಲ್ಲಿ ಹಾನಿಯನ್ನು ತಗ್ಗಿಸುವ ಸಲುವಾಗಿ ನಿಖರವಾದ ಯುದ್ಧಸಾಮಗ್ರಿಗಳೊಂದಿಗೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಗಾಜಾದ ನಾಗರಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ ಹಮಾಸ್, ಜನರನ್ನು ಕ್ರೂರವಾಗಿ ಅಪಾಯಕ್ಕೆ ಸಿಲುಕಿಸುತ್ತಿದೆ. ಕೊಲೆ, ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಆಸ್ಪತ್ರೆಗಳನ್ನು ಸಕ್ರಿಯವಾಗಿ ಬಳಸುವ ಮೂಲಕ ಅಂತರರಾಷ್ಟ್ರೀಯ ಕಾನೂನಿನ ನೇರ ಉಲ್ಲಂಘನೆ ಮಾಡಿದೆ ಎಂದು ಹೇಳಿದೆ.
ಪ್ರತ್ಯೇಕವಾಗಿ, ಹಮಾಸ್ನ ಇಬ್ಬರು ಪ್ರಮುಖ ಕಮಾಂಡರ್ಗಳನ್ನು ಕೊಂದಿರುವುದಾಗಿ ಐಡಿಎಫ್ ದೃಢಪಡಿಸಿದೆ. ಎಲಿಮಿನೇಟೆಡ್: ಹಮಾಸ್ನ ಗಾಜಾ ಬ್ರಿಗೇಡ್ನ ಉಪ ಕಮಾಂಡರ್ ಮತ್ತು ಹಮಾಸ್ನ ಶೆಜೈಯಾ ಬೆಟಾಲಿಯನ್ ಕಮಾಂಡರ್ ಎಂದು ಪೋಸ್ಟ್ ಮಾಡಿದೆ.