ಅಮರಾವತಿ: ಇಂದು ನಸುಕಿನ ಹೊತ್ತು ಉಡಾವಣೆಯಾಗಿದ್ದ ಇಸ್ರೋದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಇಸ್ರೋದ 101ನೇ ರಾಕೆಟ್ ಉಡಾವಣೆ ಇದಾಗಿದ್ದು, ಇಂದು ಬೆಳಗ್ಗೆ 5.59ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ EOS-09 ರೆಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು. 1,696 ಕಿಲೋಗ್ರಾಂ ತೂಕದ EOS-09 ರೆಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಬೇಕಿತ್ತು. ಆದರೆ 3ನೇ ಹಂತದ ಸಂಪರ್ಕ ಕಳೆದುಕೊಂಡ ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.
ಈ ಕುರಿತು ಇಸ್ರೋ ಅಧ್ಯಕ್ಷ ವಿ.ನಾರಾಯಣ ಮಾಹಿತಿ ನೀಡಿದ್ದು, ರಾಕೆಟ್ ಉಡಾವಣೆಯ ನಾಲ್ಕು ಹಂತಗಳ ಪೈಕಿ, ಮೂರನೇ ಹಂತದಲ್ಲಿ ಒತ್ತಡ ಕುಸಿತಗೊಂಡು ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿರುವ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಗೂಢಚಾರ ಉಪಗ್ರವನ್ನು ನಿರ್ಮಿಸಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಅನ್ನು ಉಪಗ್ರಹ ಹೊಂದಿದ್ದು, ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಕಡಿಮೆ ಬೆಳಕಿನಲ್ಲೂ ಭೂಮಿಯ ಮೇಲ್ಮೈಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.
ಸಾಧಾರಣವಾಗಿ ಮೋಡಗಳು, ಬಿರುಗಾಳಿ, ರಾತ್ರಿಯ ವೇಳೆ ಹೆಚ್ಚಿನ ಉಪಗ್ರಹಗಳಿಗೆ ಸರಿಯಾಗಿ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಈ ಉಪಗ್ರಹ ಮೋಡಗಳು, ಮಳೆ, ಮಂಜು ಸೇರಿದಂತೆ ಎಲ್ಲಾ ರೀತಿಯ ಹವಾಮಾನದಲ್ಲೂ ಹಗಲು ಮತ್ತು ರಾತ್ರಿ ಸ್ಷಷ್ಟವಾದ ಚಿತ್ರಗಳನ್ನು ಸೆರೆ ಹಿಡಿಯವ ಸಾಮರ್ಥ್ಯ ಹೊಂದಿತ್ತು.