ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬೆಳಗ್ಗೆ ಬಾಹ್ಯಾಕಾಶದಲ್ಲಿ ಎರಡು ಭಾರತೀಯ ಉಪಗ್ರಹಗಳನ್ನು ಡಾಕಿಂಗ್ ಅಥವಾ ಜೋಡಿಸುವಲ್ಲಿ ಯಶಸ್ವಿಯಾಗಿದೆ. ಇದು ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್)ನ ಭಾಗವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೋ, ಡಾಕಿಂಗ್ ಪ್ರಯೋಗ ಯಶಸ್ವಿಯಾಗಿದೆ ಎಂದು ಘೋಷಿಸಿದೆ. ಜೊತೆಗೆ “ಉಪಗ್ರಹಗಳ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತು! ಇದು ಐತಿಹಾಸಿಕ ಕ್ಷಣವಾಗಿದೆ. ಸ್ಪೇಡೆಕ್ಸ್ ಡಾಕಿಂಗ್ ಪ್ರಕ್ರಿಯೆಯ ಮೂಲಕ ನೋಡುವುದಾದರೆ 15 ಮೀಟರ್‌ನಿಂದ 3 ಮೀಟರ್ ಹೋಲ್ಡ್ ಪಾಯಿಂಟ್‌ಗೆ ಚಲನೆಯನ್ನು ಪೂರ್ಣಗೊಳಿಸಲಾಯಿತು. ನಿಖರತೆಯೊಂದಿಗೆ ಡಾಕಿಂಗ್ ಪ್ರಾರಂಭಿಸಲಾಗಿಯಿತು. ಬಳಿಕ ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಮೂಲಕ ಭಾರತವು ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4ನೇ ದೇಶವಾಯಿತು. ಇಡೀ ತಂಡಕ್ಕೆ ಅಭಿನಂದನೆಗಳು! ಭಾರತಕ್ಕೆ ಅಭಿನಂದನೆಗಳು!” ಎಂದು ಪೋಸ್ಟ್ ಮಾಡಿದೆ.
ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್ ಪ್ರಯೋಗ ಯಶಸ್ವಿಯಾಗಿದ್ದು, ಸ್ಪೇಡೆಕ್ಸ್ ನಲ್ಲಿ ಯಶಸ್ಸು ಕಂಡ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಗಳಿಸಿದೆ. ಈಗಾಗಲೇ ಈ ಪ್ರಯೋಗದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದ್ದು, ಭಾರತವೂ ಈ ಪ್ರಯೋಗದಲ್ಲಿ ಯಶಸ್ಸು ಲಭಿಸಿದೆ.
ಈ ಪ್ರಯೋಗದ ಭಾಗವಾಗಿ ಎಸ್‌ಡಿಎಕ್ಸ್01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್ ಯಶಸ್ವಿಯಾಗಿ ಸೇರಿಸಿತ್ತು. ಆ ಬಳಿಕ ಇಸ್ರೋ ಡಾಕಿಂಗ್ ಪ್ರಯೋಗ ನಡೆಸಿ ಯಶಸ್ವಿಯಾಗಿದೆ.