ಬಂಡಿಪೋರಾ : ಪಾಕಿಸ್ತಾನಕ್ಕೆ ಮರಳುವುದಕ್ಕಿಂತ ಇಲ್ಲಿ ಸಾಯುವುದೇ ಒಳ್ಳೆಯದು ಎಂದು ಜಮ್ಮು ಕಾಶ್ಮೀರದಲ್ಲಿ ಪುನರ್ವಸತಿ ಪಡೆದಿರುವ ಇಲ್ಲಿನ ಮಾಜಿ ಉಗ್ರರ ಪತ್ನಿಯರು ಹೇಳಿದ್ದಾರೆ.
2010ರಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ಪುನರ್ವಸತಿ ನೀತಿಯಡಿ ಕಾಶ್ಮೀರಕ್ಕೆ ಆಗಮಿಸಿದ್ದ ಈ ಪಾಕ್ ಮಹಿಳೆಯರು, ತಮ್ಮನ್ನು ಇಲ್ಲಿಯೇ ಬದುಕಲು ಬಿಡಿ. ಇಲ್ಲವೇ ಮೃತದೇಹಗಳ ಬ್ಯಾಗುಗಳಲ್ಲಿ ತುಂಬಿ ಕಳುಹಿಸಿ ಕೊಡಿ. ಪಾಕಿಸ್ತಾನಕ್ಕೆ ಮರಳುವುದಕ್ಕಿಂತ ಇಲ್ಲಿಯೇ ಸಾಯುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮಾಜಿ ಉಗ್ರನನ್ನು ವಿವಾಹವಾದ ಪಾಕ್ ಮಹಿಳೆಯೊಬ್ಬರಿಗೆ ದೇಶ ತೊರೆಯುವಂತೆ ಈಗಾಗಲೇ ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಅವರು ನಮ್ಮನ್ನು ದೇಶ ತೊರೆಯುವಂತೆ ತಿಳಿಸಿದ್ದಾರೆ. ನನಗೆ ಮೂವರು ಮಕ್ಕಳಿದ್ದಾರೆ. ನನ್ನ ಕಿರಿ ಮಗಳನ್ನು ಇಲ್ಲಿಯೇ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಆಕೆ ಚಿಕ್ಕವಳು. ನಾನು ಆಕೆಯನ್ನು ಇಲ್ಲಿ ಬಿಟ್ಟು ಹೋಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ನನ್ನ ಗಂಡನನ್ನು ಇಲ್ಲಿ ಬಿಟ್ಟು ಹೋಗುವುದು ಹೇಗೆ? ನಾನು ಇಲ್ಲಿ ಮನೆ ಕಟ್ಟಿದ್ದೇನೆ. ಸರ್ಕಾರದ ನೀತಿಯಿಂದ ನಾವು ಇಲ್ಲಿಗೆ ಬಂದಿದ್ದೇವೆ. ನಾವೇನು ಮಾಡಿದ್ದೇವೆ? ಇದರಲ್ಲಿ ನಮ್ಮ ತಪ್ಪೇನು? ನಮ್ಮಲ್ಲಿ ವೋಟರ್ ಕಾರ್ಡ್, ಆಧಾರ್ ಕಾರ್ಡ್ ಇದೆ. ನಾನು ಚುನಾವಣೆಯಲ್ಲಿ ಮತ ಹಾಕಿದ್ದೇನೆ ಎಂದಿದ್ದಾರೆ.
ಕಳೆದ 12 ವರ್ಷಗಳಿಂದ ಕಾಶ್ಮೀರದಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ಇಲ್ಲೇ ಬದುಕಲು ಅವಕಾಶ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ನಮ್ಮೊಂದಿಗೆ ಕ್ರೂರವಾಗಿ ವರ್ತಿಸಬೇಡಿ. ನಾವು ಯಾವ ಪಾಪವನ್ನೂ ಮಾಡಿಲ್ಲ. ನಮಗೆ ಇಲ್ಲಿ ವಾಸಿಸಲು ಬಿಡಿ. ಇಲ್ಲದಿದ್ದರೆ, ನಮ್ಮನ್ನು ಕೊಂದು ನಮ್ಮ ದೇಹಗಳನ್ನು ಗಡಿಗೆ ಕಳುಹಿಸಿ ಎಂದು ಕಣ್ಣೀರು ಹಾಕಿದ್ದಾರೆ.