ನವದೆಹಲಿ: ಹೌದು ಸಿಬಿಎಸ್ಇ ಮಾನ್ಯತೆ ಹೊಂದಿರುವ ಎಲ್ಲಾ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರು, ವೃತ್ತಿ ಮಾರ್ಗದರ್ಶಕರ ನೇಮಕಾತಿ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಬಲಪಡಿಸಲು, ಅವರಿಗೆ ವೃತ್ತಿ ಮಾರ್ಗದರ್ಶನ ಒದಗಿಸಲು ಸಿಬಿಎಸ್ಇ ನೀತಿ ಸುಧಾರಣೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕಳೆದ ವರ್ಷದ ಜುಲೈನಲ್ಲಿ ರಾಜಸ್ಥಾನದ ಕೋಟಾ ಮೂಲದ ವಕೀಲ ಸುಜಿತ್ ಸ್ವಾಮಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾರ್ಗದರ್ಶಕರ ನೇಮಕ ಕೋರಿ ರಾಜಸ್ಥಾನ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಕೆಲವು ನಿಯಮಗಳಿಗೆ ತಿದ್ದುಪಡಿ ತಂದು ಸುತ್ತೋಲೆ ಹೊರಡಿಸಲಾಗಿದೆ.
ಸಿಬಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಗಳು ಪ್ರತಿ 500 ವಿದ್ಯಾರ್ಥಿಗಳಿಗೆ ಪೂರ್ಣಾವಧಿಯಲ್ಲಿ ಒಬ್ಬ ಸಾಮಾನ್ಯ ಸಮಾಲೋಚಕರು, ಮಾನಸಿಕ ಆರೋಗ್ಯ ಸಮಾಲೋಚಕರು ಹಾಗೂ ಒಬ್ಬ ವೃತ್ತಿ ಮಾರ್ಗದರ್ಶಕರನ್ನು ನೇಮಕ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಮೊದಲು 9 ರಿಂದ 12ನೇ ತರಗತಿವರೆಗೆ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಮಾತ್ರ ಪೂರ್ಣ ಸಮಯದ ಮಾನಸಿಕ ಸಮಲೋಚಕರ ನೇಮಕ ಮಾಡಬೇಕಿತ್ತು. ಸಣ್ಣ ಶಾಲೆಗಳು ಅರೆಕಾಲಿಕ ಮಾದರಿಯಲ್ಲಿ ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು.

































