ಚಿತ್ರದುರ್ಗ: ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಶೇ.5 ರಷ್ಟು ಇರುವ ಮೀಸಲಾತಿಯನ್ನು ಶೇ.10ಕ್ಕೆ ಏರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕನ್ನಡ ಅನುಷ್ಠಾನದ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಸರ್ಕಾರಿ ಹಾಗೂ ಖಾಸಗಿ ವಲಯಗಳ ಉದ್ಯೋಗದಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆಯಾಗಿದೆ. ಈ ಕುರಿತು ಜಿಲ್ಲಾ ಕನ್ನಡ ಅನುಷ್ಠಾನ ಸಮಿತಿ ಸದಸ್ಯರೊಂದಿಗೆ ಚರ್ಚಿಸಿದ್ದೇನೆ. ಎಸ್.ಎಸ್.ಎಲ್.ಸಿ ವರಗೆ ಕನ್ನಡ ಭಾಷೆಯಲ್ಲಿ ಓದಿವವರಿಗೆ ರಾಜ್ಯ ಸರ್ಕಾರಿ ನೇಮಕಾತಿಗಳಲ್ಲಿ ಈಗಿರುವ ಶೇ.5 ರಷ್ಟು ಮೀಸಲಾತಿಯನ್ನು ಶೇ.10ಕ್ಕೆ ಏರಿಸಿದರೆ, ಕನ್ನಡಿಗರಿಗೆ ಉದ್ಯೋಗವಕಾಶಗಳು ಹೆಚ್ಚಾಗುತ್ತವೆ. ಇದರೊಂದಿಗೆ ಹೊರಗುತ್ತಿಗೆ ನೇಮಕಾತಿಗಳಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ರಾಜ್ಯದಲ್ಲಿರುವ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದು ಬಹುದಿನಗಳ ಕೂಗಾಗಿದೆ. ಪ್ರಾಧಿಕಾರ ಸರೋಜಿನಿ ಮಹಿಷಿ ವರದಿಗಳು ಖಾಸಗಿ ಕಂಪನಿಗಳಲ್ಲಿ ಅನುಷ್ಠಾನವಾಗಿವೇ ಎಂದು ಪರಿಶೀಲನೆ ನಡೆಸಲಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಗೆ ನಿಯಮಗಳ ರಚನೆ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಅಧಿನಿಯಮಕ್ಕೆ ನಿಯಮಗಳ ರಚನೆ ಕುರಿತು ಫೆ.11 ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಹಾಗೂ ಸರ್ಕಾರ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಮಹತ್ವ ಸಭೆ ನಡೆಯಲಿದೆ. ಸಭೆಯಲ್ಲಿ ನಿಯಮಗಳು ರಚನೆಯಾದರೆ ಕನ್ನಡವನ್ನು ಸರಿಯಾಗಿ ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ದಂಡ, ವರ್ಗಾವಣೆ ಸೇರಿದಂತೆ ಇತರೆ ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಅವಕಾಶ ಸಿಗಲಿದೆ. ಕನ್ನಡ ಅನುಷ್ಠಾನದ ವಿಷಯದಲ್ಲಿ ಉಡಾಫೆ ಪ್ರದರ್ಶಿಸುವ ಅಥವಾ ವರದಿ ನೀಡಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಮುಂದಿನ ಎರಡು-ಮೂರು ತಿಂಗಳಲ್ಲಿ ನಿರ್ಧಾಯಕ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದ ಕೆಡಿಪಿ ಸಭೆಯ ಆರಂಭದಲ್ಲಿಯೇ ಕನ್ನಡ ಭಾಷೆ ಅನುಷ್ಠಾನದ ಕುರಿತು ಚರ್ಚೆಯಾಗಬೇಕು ಎಂದು ಪ್ರಾಧಿಕಾರದಿಂದ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಊರುಗಳ ಹೆಸರು ತಿದ್ದುಪಡಿಗೆ ಅಭಿಯಾನ:
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡದ ಬಳಕೆ ಅಧ್ವಾನವಾಗಿದೆ. ಹೆದ್ದಾರಿಗಳಲ್ಲಿ ತ್ರಿಭಾಷಾ ಸೂತ್ರದ ಅಡಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದ ಸುಮಾರು 1.10 ಲಕ್ಷ ಊರುಗಳ ಹೆಸರುಗಳನ್ನು ಇಂಗ್ಲಿಷ್ ನಲ್ಲಿ ಬರೆಯುವಾಗ ಆಗುವ ಉಚ್ಚಾರಣಾ ದೋಷಗಳನ್ನು ಸರಿಪಡಿಸಲು ಬೃಹತ್ ಅಭಿಯಾನ ಆರಂಭಿಸಲಾಗಿದೆ. ನಾಮಫಲಕಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಸುಮಾರು 70 ಸಾವಿರ ಊರುಗಳ ಹೆಸರನ್ನು ಅಕ್ಷರ ಹಾಗೂ ಆಡಿಯೋ ಫೈಲ್ಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದು ಶ್ಲಾಘನೀಯ ವಿಷಯವಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಕನ್ನಡ ಭಾಷೆಯಲ್ಲಿ ನೇಮಕಾತಿ ಪರೀಕ್ಷೆ ನಡೆಸಲು ಪತ್ರ:
ಬ್ಯಾಂಕಿಗ್ ಹಾಗೂ ರೈಲ್ವೇ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಡೆಸುತ್ತಿರುವುದರಿಂದ ಕನ್ನಡಿಗರಿಗೆ ಉದ್ಯೋಗಾವಕಾಶಗಳು ತಪ್ಪುತ್ತಿವೆ. ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಒತ್ತಾಯಿಸಿ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯಲು ಪ್ರಾಧಿಕಾರ ತೀರ್ಮಾನಿಸಿದೆ. ಅಲ್ಲದೆ, ಬ್ಯಾಂಕ್ಗಳಲ್ಲಿ ಕನ್ನಡ ಬಾರದ ಅಧಿಕಾರಿಗಳ ನೇಮಕದಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಬ್ಯಾಂಕ್ನ ಎಲ್ಲ ಅರ್ಜಿಗಳು ಮತ್ತು ಚಲನ್ಗಳು ಕನ್ನಡ ಲಭ್ಯವಾಗಬೇಕು ಹಾಗೂ ಬ್ಯಾಂಕುಗಳಲ್ಲಿ ಕನಿಷ್ಠ ಒರ್ವ ಕನ್ನಡ ಬಲ್ಲ ಅಧಿಕಾರಿಯನ್ನು ನೇಮಿಸಲು ಪ್ರಾಧಿಕಾರದಿಂದ ಸೂಚನೆ ನೀಡಲಾಗಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಮದರಸಾಗಳಲ್ಲಿ ಕನ್ನಡ ಕಲಿಕೆ, ಲಿಂಗತ್ವ ಅಲ್ಪಸಂಖ್ಯಾತರ ಪದಕೋಶ ರಚನೆ:
ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಎರಡು ಪ್ರಮುಖ ಮತ್ತು ಐತಿಹಾಸಿಕ ಯೋಜನೆಗಳನ್ನು ಘೋಷಿಸಿದೆ. ಮದರಸಾಗಳಲ್ಲಿ ಕನ್ನಡ ಕಲಿಕೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಕ್ಕಾಗಿ ಪ್ರತ್ಯೇಕ ಕನ್ನಡ ಪದಕೋಶ ಸಿದ್ಧಪಡಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ.
ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಮುಖ್ಯವಾಹಿನಿಗೆ ಬರಲು ಅನುಕೂಲವಾಗುವಂತೆ ಮದರಸಾಗಳಲ್ಲಿ ಕನ್ನಡ ಕಲಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಯೋಗಿಕ ಹಂತವಾಗಿ ವಕ್ಫ್ ಮಂಡಳಿಯ ಅಡಿಯಲ್ಲಿ ಬರುವ ಆಯ್ದ 180 ಮದರಸಾಗಳಲ್ಲಿ ಈಗಾಗಲೇ ಮೂರು ತಿಂಗಳ ಮೂಲ ಕನ್ನಡ ಕಲಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. ಈ ಯೋಜನೆಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ಗಮನಿಸಿ, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸುಮಾರು 1,200 ಮದರಸಾಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ಅವರ ಸಂವಹನವನ್ನು ಸುಲಭಗೊಳಿಸಲು ವಿಶೇಷ ಪದಕೋಶವೊಂದು ಸಿದ್ಧವಾಗುತ್ತಿದೆ. ಈ ಸಮುದಾಯಕ್ಕೆ ಸಂಬಂಧಿಸಿದಂತೆ ಸುಮಾರು 300 ಪದಗಳ ‘ಸಾಂಸ್ಕøತಿಕ ವಿವರಣಾ ಕೋಶ’ವನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಅಕ್ಕೈ ಪದ್ಮಶಾಲಿ, ರೂಬಿ ಹರೀಶ್ ಹಾಗೂ ವಸುಧೇಂದ್ರ ಅವರಂತಹ ತಜ್ಞರೊಂದಿಗೆ ನೆರವು ಪಡೆಯಲಾಗಿದೆ. ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೆ ಕನ್ನಡ ಪಠ್ಯಪುಸ್ತಕಗಳಲ್ಲಿ ನಿರಂತರತೆ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಧಿಕಾರವು, 1 ರಿಂದ 10ನೇ ತರಗತಿಯವರೆಗಿನ ಶಿಕ್ಷಕರನ್ನು ಒಳಗೊಂಡ ಸಮಿತಿಯ ಮೂಲಕ ಪಠ್ಯಕ್ರಮದ ಸುಧಾರಣೆಗೆ ಕ್ರಮ ಕೈಗೊಳ್ಳಲಿದೆ. ಇದರೊಂದಿಗೆ ನಲಿ-ಕಲಿ ಯೋಜನೆಯ ಕುರಿತು ಸರ್ಕಾರಕ್ಕೆ ವಿವರವಾದ ವರದಿ ನೀಡಲಾಗುವುದು. ಪ್ರಾಧಿಕಾರ ಸಾಹಿತ್ಯಕ್ಕಿಂತ ಹೆಚ್ಚಾಗಿ ದೈನಂದಿನ ಸಂವಹನಕ್ಕೆ ಪೂರಕವಾದ ‘ಭಾಷೆಯನ್ನು ಕಲಿಸಲು ಸರಳವಾದ ವಿಶೇಷ ಪಠ್ಯಪುಸ್ತಕವನ್ನು ಸಿದ್ಧಪಡಿಸಿದೆ. ಸಾಹಿತ್ಯಕ್ಕಿಂತ ಹೆಚ್ಚಾಗಿ ‘ಭಾಷಾ ಜ್ಞಾನ’ಕ್ಕೆ ಒತ್ತು ನೀಡುವ ಪದ್ಧತಿಯನ್ನು ಜಾರಿಗೆ ತರುವುದು ಪ್ರಾಧಿಕಾರದ ಗುರಿಯಾಗಿದೆ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಶಿಕ್ಷಕರ ಕೊರತೆ ಬಗ್ಗೆ ವರದಿ ಸಲ್ಲಿಕೆ:
ರಾಜ್ಯಾದ್ಯಂತ ಸುಮಾರು 55 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ಸುಮಾರು 20 ರಿಂದ 25 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ. ಶಿಕ್ಷಣ ಇಲಾಖೆಗೆ ಸುಮಾರು 75,000 ದಿಂದ 80,000 ಶಿಕ್ಷಕರ ಅಗತ್ಯವಿದೆ. ಪ್ರಸ್ತುತ ಸರ್ಕಾರವು ಸುಮಾರು 35,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ತಾತ್ಕಾಲಿಕವಾಗಿ ಸಮಸ್ಯೆಯನ್ನು ನಿಭಾಯಿಸುತ್ತಿದೆ. ಮುಂಬರುವ ಮಾರ್ಚ್ ವೇಳೆಗೆ ಸುಮಾರು 25,000 ಹೊಸ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿನ ಶಿಕ್ಷಕರ ಕೊರತೆ ಮತ್ತು ವಿದ್ಯಾರ್ಥಿಗಳ ಅನುಪಾತದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಇದನ್ನು ಆಧರಿಸಿ ಶಿಕ್ಷಣ ಸಚಿವರು ಮತ್ತು ಆಯುಕ್ತರೊಂದಿಗೆ ಅವರೊಂದಿಗೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಭಾಷಾ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅರಿವು ಮೂಡಿಸಲು ಸರ್ಕಾರಿ ಶಾಲೆಗಳಿಗೆ ಕನ್ನಡ ದಿನಪತ್ರಿಕೆಗಳನ್ನು ಪೂರೈಸುವ ಬಗ್ಗೆಯೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸುವುದಾಗಿ ಡಾ.ಪುರುಷೋತ್ತಮ ಬಿಳಿಮಲೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್, ನಾಮನಿರ್ದೇಶಿತ ಸದಸ್ಯ ಡಾ.ಎ.ಬಿ.ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಸಂಗೇನಹಳ್ಳಿ ಅಶೋಕ್ಕುಮಾರ್, ಡಾ.ಚಿತ್ತಯ್ಯ, ಡಾ.ವೇಂದಾತ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.






























