ಚಿತ್ರದುರ್ಗ : ಚುನಾವಣಾ ಆಯೋಗ ತನ್ನ ನಿಷ್ಪಕ್ಷಪಾತತೆ ಕಳೆದುಕೊಂಡು ಸರ್ಕಾರದ ಪರವಾಗಿ ನಡೆದುಕೊಳ್ಳುತ್ತಿದೆ. ಎಸ್ಐಆರ್ ಮೂಲಕ ತಮಗೆ ಬೇಡವಾದವರನ್ನು ಮತಪಟ್ಟಿಯಿಂದ ಕಿತ್ತು ಹಾಕಲಾಗುತ್ತಿದೆ. ಇಡೀ ಪ್ರಜಾಪ್ರಭುತ್ವ ತಲೆಕೆಳಗಾಗಿ ನಿಲ್ಲುತ್ತಿದೆ. ಇದು ಭಾರತದ ಆತ್ಮದ ಮೇಲೆ ದಾಳಿ. ಎಸ್ಐಆರ್ ಎಂದರೆ ಪರೋಕ್ಷವಾಗಿ ಎನ್ಆರ್ಸಿ, ಮತದಾನದ ಜೊತೆಗೆ ಹಕ್ಕುಗಳ, ಪೌರತ್ವದ, ನಾಗರೀಕತ್ವ ನಿರಾಕರಣೆ ಎಂದೇ ಅರ್ಥ” ಎಂದು ಚಿತ್ರದುರ್ಗದ ಎಸ್ಐಆರ್ ಕುರಿತ ವಿಚಾರ ಸಂಕಿರಣದಲ್ಲಿ ಸಾಮಾಜಿಕ ಚಿಂತಕ ಶಿವಸುಂದರ್ ಆರೋಪಿಸಿದರು.
ಚಿತ್ರದುರ್ಗದ ಡಾ.ಬಿಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಜನಶಕ್ತಿ, ಅಹಿಂದ, ಜಮಾತೆ ಹಿಂದ್, ಕ್ರಿಶ್ಚಿಯನ್ ಫೋರಂ ಹಾಗೂ ಎದ್ದೇಳು ಕರ್ನಾಟಕ ಆಯೋಜಿಸಿದ್ದ “ಎಸ್ಐಆರ್-ಪ್ರಜಾತಂತ್ರದ ಅಪಪರಣ ಮತ್ತು ಪುನರ್ ಸ್ಥಾಪನೆ” ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ ಕುರಿತು ಮಾತನಾಡಿ “ಭಾರತದಲ್ಲಿ ಮುಂಚಿನಿಂದಲೂ ಎಲ್ಲರೂ, ಎಲ್ಲಾ ನಾಗರೀಕರು ಸಮಾನರು ಎಂಬುದು ಯಾವತ್ತೂ ಇರಲಿಲ್ಲ. ಭೂ ಒಡೆತನವುಳ್ಳವರು, ಸೇರಿದಂತೆ ಮೇಲ್ವರ್ಗದವರು ನಾಗರೀಕ ಹಕ್ಕುದಾರರು, ಉಳಿದವರು ಅವರ ಸೇವೆ ಮಾಡುವವರು ಎಂಬಂತಿತ್ತು. ನಾಗರೀಕ ತಿಳುವಳಿಕೆ , ಸಮಾನ ಹಕ್ಕು ಎಂಬ ಪರಿಕಲ್ಪನೆ ಹುಟ್ಟಿದ್ದು 18-19 ಶತಮಾನದಲ್ಲಿ, ಆಗ ಸಮಾನ ಭಾರತ ಕಟ್ಟಲು ಆಲೋಚನೆ ಶುರುವಾಯಿತು. ಹಾಗಾಗಿ ಅಂದು ಭಾರತದ ಬಗ್ಗೆ ಅಂಬೇಡ್ಕರ್ “ಭಾರತದಲ್ಲಿ ಅಂತರಿಕ ವಸಾಹತು ಶಾಹಿ ಭಾರತವಿದೆ” ಎಂದಿದ್ದರು. ಹೀಗಾಗಿಭೂರಹಿತರಿಗೆ, ದಲಿತ, ಮಹಿಳೆಯರು ಸೇರಿ ನಿರ್ಗತಿಕರಿಗೂ, ಮತದಾನದ ಮತ್ತು ಸಮಾನ ಹಕ್ಕು ನೀಡಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದರು. ಆದರೂ ಕಾಂಗ್ರೆಸ್ ಒಳಗೂ ಕೂಡ ದಲಿತರು ಹಾಗೂ ಮಹಿಳೆಯರಿಗೆ ಹಕ್ಕು ನಿರಾಕರಿಸುವ ಜನ ಇದ್ದರು” ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ನಂತರ ಸರ್ವರಿಗೂ ತಾರತಮ್ಯ ಇಲ್ಲದ ಸಮಾನ ಭಾರತ ಕಟ್ಟಲು ಯೋಚನೆ ಶುರುವಾಯಿತು. ಅಂದು ಇದಕ್ಕೆ ತದ್ವಿರುದ್ಧವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಮನುಸ್ಮೃತಿ ಆಧಾರಿತ ಸಂವಿಧಾನ ಕಟ್ಟುವ ಯೋಜನೆ ಕೂಡಾ ನಡೆಯುತ್ತಿತ್ತು. ಪ್ರಜಾಪ್ರಭುತ್ವದ ತಾಯಿ ಎನಿಸಿಕೊಂಡಿರುವ ಇಂಗ್ಲೆಂಡಿನಲ್ಲಿ ಕೂಡ 1948ರಲ್ಲಿ ಬ್ರಿಟಿಷ್ ಮಹಿಳೆಯರು ಹಕ್ಕು ಪಡೆದರು, ಅದಕ್ಕೂ ಮುನ್ನ ಅವರಿಗೆ ಮತದ ಹಕ್ಕು ಇರಲಿಲ್ಲ. ಅಮೇರಿಕಾದಲ್ಲಿ 1967ರಲ್ಲಿ ಕಪ್ಪು ಜನ ಸೇರಿ ಎಲ್ಲಾ ತಳ ವರ್ಗಗಳ ಜನರಿಗೂ ಮತದಾನದ ಹಕ್ಕು ದೊರೆಯಿತು. ದೊಡ್ಡ ದೊಡ್ಡ ಹೋರಾಟ ಮಾಡುವ ಮೂಲಕ ಜನಸಾಮಾನ್ಯರ ಸಮಾನ ಸ್ವಾತಂತ್ರ್ಯ ಕಲ್ಪನೆಯನ್ನು ಭಿತ್ತಲಾಗಿದೆ. ಸ್ವಾತಂತ್ರ್ಯ ನಂತರ ಸಂವಿಧಾನದ ಮೂಲಕ ಮಹಿಳೆ ಸೇರಿದಂತೆ ಎಲ್ಲರಿಗೂ . ರಾಜಕೀಯ, ಸಾಮಾಜಿಕ, ಸಮಾನತೆ ಹಕ್ಕು ನೀಡಲಾಗಿದೆ” ಎಂದು ತಿಳಿಸಿದರು.
“ಎಸ್ಐಆರ್ ನ ದ್ವಂದ್ವ ಅರ್ಥವಾಗಬೇಕಾದರೆ ಸಂವಿಧಾನ ಮೂಲಭೂತ ತತ್ವಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದಲ್ಲಿ ಮತದಾನದ ಹಕ್ಕು ಉಳ್ಳ ಜನರೇ ಸಾರ್ವಭೌಮ. ಷರತ್ತಿನ ಮೂಲಕ
ಸರ್ಕಾರಕ್ಕೆ ಕಾನೂನು ರಚಿಸುವ ಹಕ್ಕು ನೀಡುತ್ತೇವೆ” “1951ರಲ್ಲಿ ಭಾರತೀಯ ನಾಗರೀಕ ಕಾಯ್ದೆಯ ಪ್ರಕಾರ ನಾಗರೀಕರೆಂದರೆ ಯಾರು? ಎನ್ನುವ ಬಗೆ ಸ್ಪಷ್ಟನೆ ನೀಡಲಾಗಿದೆ. ಸಂವಿಧಾನದ ಕಲಂ 3-11ರವರೆಗೆ ಈ ದೇಶದ ನಾಗರಿಕರ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾರು ಯಾರು ದೇಶದಲ್ಲಿ ಹುಟ್ಟುತ್ತಾರೆಯೋ ಅವರೂ ಕೂಡ ನಾಗರೀಕರು, ನಾಗರೀಕತ್ವ ಪಡೆಯಲು ಜಾತಿ, ಧರ್ಮ, ಭಾಷೆ, ಲಿಂಗ ಕಡ್ಡಾಯ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ” ಎಂದು ತಿಳಿಸಿದರು.
“ಮುಕ್ತ ನಿರ್ಭೀತ ಚುನಾವಣೆ ಪ್ರಜಾತಂತ್ರದ ಆಶಯವಾಗಿದೆ. ಸ್ವಾತಂತ್ರ್ಯ ನಂತರ ಇದ್ದ ಭಾರತದ 35ಕೋಟಿ ಜನಸಂಖ್ಯೆಯಲ್ಲಿ 85% ಅನಕ್ಷರಸ್ಥರಿದ್ದರು. ಅವರನ್ನು ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸುವುದೇ ಚುನಾವಣಾ ಆಯೋಗದ ಸವಾಲಾಗಿತ್ತು. ಹಾಗಾಗಿ ಪ್ರಥಮ ಬಾರಿಗೆ ಚಿಹ್ನೆ ಆಧಾರಿತ ಚುನಾವಣೆಯನ್ನು ಮೊದಲು ಭಾರತದಲ್ಲಿ ನಡೆಸಲಾಯಿತು ಹಾಗೂ ಎಲ್ಲರನ್ನೂ ಒಳಗೊಳ್ಳಲಾಯಿತು” ಎಂದು ತಿಳಿಸಿದರು.
“ಅಂದಿನಿಂದಲೂ ಚುನಾವಣಾ ಆಯೋಗ ಇಂಟೆನ್ಸಿವ್ ರಿವಿಜನ್ ಗಳನ್ನು ಕಾಲ ಕಾಲಕ್ಕೆ ಮಾಡಿಕೊಂಡು ಬರುತ್ತಿದೆ. ಮತದಾರರ ಪಟ್ಟಿಯಲ್ಲಿ ಅರ್ಹರನ್ನು ಸೇರಿಸುವುದು ಅನರ್ಹರನ್ನು ತೆಗೆದುಹಾಕುವುದು ಇಂಟೆನ್ಸಿವ್ ರಿವಿಜನ್ ಮುಖ್ಯ ಉದ್ದೇಶ. ಆದರೆ ಇತ್ತೀಚಿಗೆ ಆಳುವವರ ಕೈಗೊಂಬೆಯಾಗಿರುವ ಚುನಾವಣಾ ಆಯೋಗ ಸ್ಪೆಷಲ್ ಇಂಟೆನ್ಸಿವ್ ರಿವಿಜನ್ (ಎಸ್ಐಆರ್) ನಡೆಸುತ್ತಿದೆ. ಇದರಲ್ಲಿ ಸ್ಪೆಷಲ್ ಎನ್ನುವುದನ್ನು ಸೇರಿಸಿಕೊಂಡು ಮತದಾರರ ಪಟ್ಟಿಯ ನಿಯಮಗಳನ್ನು ಉಲ್ಟಾ ಮಾಡಿದೆ” ಎಂದು ಆರೋಪಿಸಿದರು.
“ಇದಕ್ಕೆ ಕಾರಣ ನೀಡಿರುವ ಚುನಾವಣಾ ಆಯೋಗ ಅತಿ ಹೆಚ್ಚು ವಲಸೆ, ಇಮಿಗ್ರೇಷನ್ ಆಗಿದೆ. ವಿದೇಶಿಯರು ಮತದಾನದ ಹಕ್ಕನ್ನು ಅಕ್ರಮವಾಗಿ ಪಡೆದಿದ್ದಾರೆ. ಅವರ ಅವರ ಪತ್ತೆಗಾಗಿ ಎಸ್ಐಆರ್ ನಡೆಸುತ್ತಿದ್ದೇವೆ ಎನ್ನುತ್ತಾರೆ ಆದರೆ ಇವರ ಮುಖ್ಯ ಉದ್ದೇಶ ಉಳ್ಳವರ, ಮೇಲ್ಜಾತಿಯವರ, ವಿಶೇಷವಾಗಿ ಕೇವಲ ಮೇಲ್ವರ್ಗದವರೇ ಇರುವ ಹಿಂದುಗಳ ಸಂವಿಧಾನ, ಭಾರತವನ್ನಾಗಿ ರೂಪಿಸುವುದು. ಹಾಗೂ ಈ ದೇಶದ ಬಹುಸಂಖ್ಯಾತ ತಳವರ್ಗಗಳ, ಮುಸ್ಲಿಮರ ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ನಿರಾಕರಿಸುವ ಮೂಲಕ ಅವರಿಗೆ ನಾಗರಿಕತ್ವವನ್ನು ನಿರಾಕರಿಸುವುದೇ ಆಗಿದೆ” ಎಂದು ಅನುಮಾನ ವ್ಯಕ್ತಪಡಿಸಿದರು.
“ಎಸ್ಐಆರ್ ಮೂಲಕ ಮತ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಬೇಕಾದರೆ 2003ರ ರಿಲಿಜನ್ ದಾಖಲೆ ಇರಬೇಕು. 1987-2004 ಡಿಸೆಂಬರ್ 4ರ ನಡುವೆ ಹುಟ್ಟಿದ್ದರೆ ತಾವು ಹುಟ್ಟಿದ, ಜೊತೆಗೆ ತಂದೆ ತಾಯಿ ಹುಟ್ಟಿದ ದಾಖಲೆ ನೀಡಬೇಕು. 1987 ಜೂನ್ 30ಕ್ಕೆ ಮುಂಚೆ ಹುಟ್ಟಿದ ದಾಖಲೆ, ಹತ್ತನೇ ತರಗತಿ (ಮೆಟ್ರಿಕ್) ಪ್ರಮಾಣ ಪತ್ರ ಪಾಸ್ಪೋರ್ಟ್, ಪ್ರಾಪರ್ಟಿ ಪತ್ರ, ಯಾವುದಾದರೂ ಸಾರ್ವಜನಿಕರ ಕಾರ್ಖಾನೆ ಪತ್ರ, ಪೋಲಿಸ್ ಠಾಣೆ ಪ್ರಕರಣ ಸೇರಿ 11 ದಾಖಲೆಗಳನ್ನು ಮಾನ್ಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದೆ. ಆದರೆಕರ್ನಾಟಕದಲ್ಲಿಯೇ ಭೂರಹಿತರು 67%ಇದ್ದಾರೆ, ದಲಿತರು ಸೇರಿ ಬಹುತೇಕ ಮಹಿಳೆಯರು ಹುಟ್ಟಿದ ದಾಖಲೆ ಇಲ್ಲದವರೇ ಇದ್ದಾರೆ. ಅವರೆಲ್ಲರೂ ಎಸ್ಐಆರ್ ನಿಂದಾಗಿ ನಾಗರಿಕತ್ವದಿಂದ ಹೊರಗುಳಿಯಲ್ಲಿದ್ದಾರೆ.ಆಧಾರ್, ರೇಷನ್, ಮತದಾರರಚೀಟಿ, ಲೇಬರ್ ಕಾರ್ಡ್ ಹಾಗೂ ಇತರ ದಾಖಲೆ ಮಾನ್ಯ ಮಾಡಲು ಒಪ್ಪುತ್ತಿಲ್ಲ. ಶಿಕ್ಷಣ, ವೃತ್ತಿ, ಆಸ್ತಿಗಳನ್ನು ನಾಗರಿಕತ್ವ ಪಡೆಯಲು ಮಾನದಂಡ ಅಲ್ಲ ಎಂದು ಸಂವಿಧಾನವೇ ಪ್ರತಿಪಾದಿಸಿತ್ತು. ಯಾವುದನ್ನು ಸಂವಿಧಾನ ಮಾನದಂಡ ಅಲ್ಲ ನಿರಾಕರಣೆ ಮಾಡಿದೆಯೋ, ಅದನ್ನೇ ದಾಖಲೆಯನ್ನಾಗಿ ಬದಲಾಯಿಸಿ ಚುನಾವಣಾ ಆಯೋಗ ಈ ದೇಶದ ಬಹುಸಂಖ್ಯಾತರ ಸಂವಿಧಾನಿಕ ಹಕ್ಕನ್ನು ನಿರಾಕರಿಸಲು ಹೊರಟಿದೆ” ಎಂದು ಆಪಾದಿಸಿದರು.
“2019ರಲ್ಲಿ ಎನ್ಆರ್ಸಿ ಜಾರಿಗೆ ತರಲು ಮೋದಿ ಸರ್ಕಾರ ಹುನ್ನಾರ ನಡೆಸಿದ್ದು, ಅದರ ವಿರುದ್ಧ ದೇಶಾದ್ಯಂತ ಹೋರಾಟ ನಡೆದಿದ್ದು ಕೋವಿಡ್ ಸಮಯದಲ್ಲಿ ಕೈ ಬಿಡಲಾಗಿತ್ತು. ಅದರ ಬದಲು ಚುನಾವಣೆ ಆಯೋಗವನ್ನು ಉಪಯೋಗಿಸಿಕೊಂಡು ಎಸ್ಐಆರ್ ಮೂಲಕ ಪ್ರಜಾತಂತ್ರವನ್ನು ಬುಡಮೇಲಾಗಿಸಲು ಹೊರಟಿದೆ. ಅದು ಹೇಳುವ ಪ್ರಕಾರ ದೇಶದ 140 ಕೋಟಿ ಪ್ರಜೆಗಳೆಲ್ಲರೂ ವಿದೇಶಿಯರೇ. ಅಲ್ಲ ಎಂದು ಸಾಬೀತು ಪಡಿಸಲು ದಾಖಲೆಗಳನ್ನು ನೀಡುವ ಅನಿವಾರ್ಯತೆ ಎಲ್ಲರಿಗೂ ಎದುರಾಗಿದೆ. ಕರ್ನಾಟಕದಲ್ಲಿ 2026ರ ಏಪ್ರಿಲ್ ವೇಳೆಗೆ ಎಸ್ಐಆರ್ ಪ್ರಾರಂಭವಾಗಲಿದ್ದು ಕರ್ನಾಟಕದಲ್ಲಿ 7.5ಕೋಟಿ ಜನರು ಕೂಡ ಕಳ್ಳರಲ್ಲ, ವಿದೇಶಿಯರಲ್ಲ ಎಂದು ಸಾಬೀತು ಪಡಿಸಲು ದಾಖಲೆ ನೀಡಬೇಕು. ಆದರೆ ಚುನಾವಣೆ ಆಯೋಗಕ್ಕೆ ನಾಗರೀಕತ್ವ ಪ್ರಮಾಣಿಕರಿಸುವ ಹಕ್ಕು ಇದೆಯಾ” ಎಂದು ಪ್ರಶ್ನಿಸಿದರು.
“ಬಿಹಾರದಲ್ಲಿ ಎಸ್ಐಆರ್ ಮಾಡಲು ಹೊರಟ ಚುನಾವಣಾ ಆಯೋಗ ಅಂತಿಮವಾಗಿ ಅಲ್ಲಿ ವಿದೇಶಿಯರು ಯಾರು ಎಂದು ಹೇಳಲೇ ಇಲ್ಲ. ಅದರ ಬದಲು ಬಿಹಾರದಲ್ಲಿ ಬಹುಪಾಲು ಹೆಣ್ಣು ಮಕ್ಕಳು, ಮುಸ್ಲಿಂರನ್ನು ಮತದಾನದಿಂದ ಕಿತ್ತು ಹಾಕಲಾಗಿದೆ.ನ್ಯಾಯಿಕ ಆದೇಶದ ಮೂಲಕ ನಾಗರೀಕತ್ವ ತೀರ್ಮಾನಿಸಬೇಕು ಎಂದು 1995ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅದನ್ನು ತಿರಸ್ಕರಿಸಿ ಕಿತ್ತು ಹಾಕಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“2026ಕ್ಕೆ ಜನಗಣತಿ ಪ್ರಾರಂಭವಾಗಲಿದೆ, ಆದ್ದರಿಂದ ಈ ಮೂಲಕ ಮುಸ್ಲಿಂರನ್ನು ಹೊರಗಿಟ್ಟು ಗಣತಿ ಕಾರ್ಯ ನಿರ್ವಹಿಸಲು ತಂತ್ರಗಾರಿಕೆ ರೂಪಿಸಿ ಅವಸರದಲ್ಲಿ ಎಸ್ಐಆರ್ ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ ಬಿಹಾರದಲ್ಲಿ ಕೇವಲ ಒಂದು ತಿಂಗಳಲ್ಲಿ ಎಸ್ಐಆರ್ ಮುಗಿಸಲು ಆದೇಶಿಸಲಾಗಿದ್ದು, ಸಾಂವಿಧಾನಿಕವಾಗಿ ಉಳ್ಳವರ, ಮೇಲ್ಜಾತಿಯ ಭಾರತವಾಗಿ ರೂಪಿಸಲು ಹುನ್ನಾರ ನಡೆಸಲಾಗಿದೆ” ಎಂದು ಅನುಮಾನ ವ್ಯಕ್ತಪಡಿಸಿದರು.
“ಎಸ್ಐಆರ್ ಸಾರಾಸಗಟಾಗಿ ನಿರಾಕರಿಸುವ ಮೂಲಕ ಸುಶಿಕ್ಷಿತರು, ಜನಸಾಮಾನ್ಯರು ಪ್ರತಿರೋಧ ತೋರಬೇಕಾಗಿದೆ. ವಿರೋಧಪಕ್ಷಗಳಿಂದ ಗೆಲುವು ಸಾಧ್ಯವಿಲ್ಲ. ಬೀದಿ ಹೋರಾಟದ ಮೂಲಕ ಪ್ರಜಾತಾಂತ್ರಿಕ ಸಮಾಜ ಕಟ್ಟಬೇಕು. ಇವಿಎಂ, ಮತಗಳ್ಳತನಕ್ಕಿಂತಲೂ ಹೆಚ್ಚು ಮತಿಗಳ್ಳತನ ನಡೆದಿದೆ” ಎಂದು ಅಭಿಪ್ರಾಯಪಟ್ಟರು.
ಧಮ್ಮ, ವಿಮುಕ್ತಿ ಸಂಸ್ಥೆಯ ಮುಖ್ಯಸ್ಥ ವಿಶ್ವಸಾಗರ್ ಮಾತನಾಡಿ “ಯಾವುದೇ ರಾಜಕೀಯ ಮುಖಂಡರು ಎಸ್ಐಆರ್ ವಿರೋಧಿಸುತ್ತಿಲ್ಲ. ಹಾಗೆಂದು ನಿರಾಸೆಬೇಡ. ಜನಸಾಮಾನ್ಯರು ಹೋರಾಟಕ್ಕಿಳಿಯಬೇಕು. ಹಿಂದೂ ಮುಸ್ಲಿಂ ಕ್ರೈಸ್ತ ಯಾರೇ ಇರಲಿ ಶಾಲೆ ಕಾಲೇಜುಗಳಲ್ಲಿ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು. ಮನೆಯಿಂದಲೇ ಇದರ ಪ್ರತಿರೋಧ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಮನೆ ಮನೆಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಬೇಕು. ಮಠಗಳಲ್ಲಿ ಹಿಂದುತ್ವದ ಪಾಠ ಹೇಳುವಾಗ ಮಸೀದಿಗಳಲ್ಲಿ ಎಸ್ಐಆರ್ ಜಾಗೃತಿ ಏಕೆ ಮಾಡಬಾರದು. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಅರಿವು ಹಂಚಿಕೊಳ್ಳುವ ಪ್ರಯತ್ನವಾಗಬೇಕು. ಸಂಘಟಿತರಾಗಿ ಬೀದಿಗಿಳಿದು ಹೋರಾಟದ ಮೂಲಕ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಆ ಮೂಲಕ ಎಸ್ಐಆರ್ ವಿರುದ್ಧ ಹೋರಾಟ ಕಟ್ಟಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಂ ಜೆಡ್ ಅನ್ಸಾರಿ, ಯಾದವ್ ರೆಡ್ಡಿ, ಲಕ್ಷ್ಮಿಕಾಂತ್, ಪೂರ್ಣಿಮಾ ಹಾಗೂ ಮುಖಂಡರಾದ ಶಫೀವುಲ್ಲಾ, ಸುರೇಶ್ ಬಾಬು, ಶಿವಕುಮಾರ್, ರಿಜ್ವಾನ್, ವಾಹಿದ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.






























