ಬೆಂಗಳೂರು : ಮಹಾಕುಂಭಮೇಳದಲ್ಲಿ ನಟ ಜಗ್ಗೇಶ್ ಕೂಡ ಇದರಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಅನುಭವದ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
‘ಕಳೆದ ಬಾರಿ 1880ರಲ್ಲಿ ನಡೆದದ್ದು ಈ ಮಹಾಕುಂಭಮೇಳ. ನನ್ನ ತಾತನ ಜನನ ಆದದ್ದು 1896ರಲ್ಲಿ. ಅಂದರೆ ನಮ್ಮ ತಾತ ಹುಟ್ಟುವ 16ವರ್ಷದ ಹಿಂದೆ. ನಮ್ಮ ತಾತನಿಂದ ನನ್ನ ಮೊಮ್ಮಗ ಅರ್ಜುನ 5ನೇ ತಲೆಮಾರಿಗೆ ಬಂದಿದೆ. ಮುಂದಿನ ಬಾರಿ ಈ ಮಹಾಕುಂಭ ಬರೋದು 2170 ಇಸವಿಯಲ್ಲಿ. ಅಂದರೆ ನಮ್ಮ ಮುಂದಿನ 5 ತಲೆಮಾರಿನ ಬದುಕು ಇಲ್ಲವಾಗಿರುತ್ತದೆ.’
‘ನಾನು ನನ್ನದು ನನ್ನಹಣ ನನ್ನ ಮನೆ ನನ್ನ ಹೆಂಡತಿ ನನ್ನ ಮಕ್ಕಳು ನನ್ನ ಪರಿವಾರ ಎನ್ನುವ ಕಥೆ ಏನಾಗಿರುತ್ತದೆಯೋ ದೇವರೆ ಬಲ್ಲ. ಕಡೆಯಪಕ್ಷ ನಮ್ಮ ಚಿತ್ರಪಟವು ಗೋಡೆಯಿಂದ ಮರೆಯಾಗಿ ಅಟ್ಟ ಸೇರುತ್ತೆ, ಇಲ್ಲ ಕಸದ ಜೊತೆ ಲೀನ. ನಾವು ದುಡಿದದ್ದು ಮುಂದಿನವರು ಉಳಿಸಿಕೊಂಡಿದ್ದರೆ ಅಲ್ಪಸ್ವಲ್ಪ ಹರಟೆಯಲ್ಲಿ ನಮ್ಮ ಹೆಸರು ಬಂದುಹೋಗಬಹುದು.’
‘ಆದರೆ ಯಾರು ಹೋದರೂ ಒಬ್ಬರು ನೆನಪಲ್ಲಿ ಉಳಿದೇ ಇರುತ್ತಾರೆ ಅವರೇ ಶಾರದಾಸುತರು ಅಂದರೆ ಗಾಯಕರು ನಟರು ನಟಿಯರು ಸಂಗೀತ ವಿದ್ವಾಂಸರು ಹಾಗು ಲೇಖಕರು. ಅಲ್ಲಿಗೆ ಯಾವ ಪುರುಷಾರ್ಥಕ್ಕೆ ಮನುಷ್ಯರು ನಾವು ನಾವೇ ,ನಮ್ಮದೇ, ನಂದೇ, ನಾನಿಲ್ಲದೇ, ಎಂಬ ಅಜ್ಞಾನ ಬೇರೂರಿದೆ ಒಳಗೆ. ಈ ಮಹಾಕುಂಭಕ್ಕೆ ಆಧ್ಯಾತ್ಮಿಕ ಸಾಧನೆಗೆ ಹೋದವರಿಗೆ ನಾನು ಮೇಲೆ ಹೇಳಿದ್ದ ಎಲ್ಲಾ ಮಾತುಗಳು ಮಾನಸದಲ್ಲಿ ಮಜ್ಜನವಾಗಿ, ನಾನು ದೇಹವಲ್ಲ ಮುಂದೆ ಮಣ್ಣು ಎಂಬ ಅರಿವು ಮನದ ಆಳಕ್ಕೆ ಹೋಗಿ, ಮನನವಾಗಿ ಮೌನವಾಗಿ ಅಹಂಕಾರ ಅಡಗಿ ಶಾಂತವಾಗುತ್ತದೆ ಮನಸ್ಸು.’
‘ನಾನು ಹೋದೆ ನೋಡಿದೆ ಬಂದೆ ಎನ್ನುವವರಿಗೆ ಅವರ ಬದುಕಿನ ಮತ್ತೊಂದು ಪ್ರವಾಸ ಅನ್ನಿಸುತ್ತದೆ. ನಾನು ಭಾವುಕನಾದೆ ನನ್ನ ವಂಶದ ಎಲ್ಲಾ ಹಿರಿಯರ ನೆನೆದೆ ಮುಂದಿನ ಪೀಳಿಗೆಯ ಮಕ್ಕಳಿಗೆ ಶುಭಕೋರಿದೆ. ನನಗನ್ನಿಸಿದ್ದು ದೇವರ ಕೃಪೆಯಿಲ್ಲದೆ ನಮ್ಮ ಬದುಕಿನ ಆಟ ಯಾವುದೂ ನಡೆಯದು. ಇನ್ನೂ ಸಮಯವಿದೆ. ಹೋಗುವವರು ಹೋಗಿ ಬನ್ನಿ. ಮತ್ತೆ ನೋಡಲಾಗದು ಈ ಮಹಾಕುಂಭ. ಸರ್ವೇಜನಾಃಸುಖಿನೋಭವಂತು’