ನವದೆಹಲಿ : ಉಗ್ರ ತಹವ್ವೂರ್ ರಾಣಾನ ಹಸ್ತಾಂತರವು ಮುಂಬೈ ದಾಳಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ದೊಡ್ಡ ಹೆಜ್ಜೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಉಭಯ ದೇಶಗಳ ನಡುವಿನ ಭಯೋತ್ಪಾದನಾ ನಿಗ್ರಹದ ಸಹಕಾರವನ್ನು ಪ್ರಶಂಸಿಸಿದ್ದಾರೆ. ಇದು ನಿಜಕ್ಕೂ ಮುಂಬೈ ದಾಳಿಯ ಸಂತ್ರಸ್ತರಿಗೆ ನ್ಯಾಯವನ್ನು ಖಾತ್ರಿಪಡಿಸುವ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.
ಜೈಶಂಕರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, 2008 ರ ಭೀಕರ ಮುಂಬೈ ಭಯೋತ್ಪಾದಕ ದಾಳಿಯನ್ನು ಯೋಜಿಸುವಲ್ಲಿ ಪಾತ್ರ ವಹಿಸಿದ ಆರೋಪಗಳನ್ನು ಎದುರಿಸುತ್ತಿರುವ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಿದ್ದೇವೆ. ಈ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡ 6 ಅಮೆರಿಕನ್ನರು ಸೇರಿದಂತೆ 166 ಜನರಿಗೆ ನ್ಯಾಯಕ್ಕಾಗಿ ನಾವು ಭಾರತದೊಂದಿಗೆ ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದ್ದೇವೆ. ಆ ದಿನ ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.