ಶ್ರೀನಗರ : ಭದ್ರತಾ ಪಡೆಗಳು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಸಮೀಪ ಇಂದು ನಸುಕಿನ ಹೊತ್ತು ನಡೆಸಿದ ಎನ್‌ಕೌಂಟರ್‌ನಲ್ಲಿ ಜೈಶ್-ಎ ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಭಯೋತ್ಪದಕರು ಹತರಾಗಿದ್ದಾರೆ.
ಗುರುವಾರ ನಸುಕಿನ ಹೊತ್ತು ಭದ್ರತಾ ಪಡೆ ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಕಾಳಗ ನಡೆದಿದೆ. ಆರಂಭದಲ್ಲಿ ಓರ್ವ ಉಗ್ರನನ್ನು ಕೊಲ್ಲಲಾಗಿತ್ತು. ಬಳಿಕ ಇಬ್ಬರು ಬಲಿಯಾದರು. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಆರು ಉಗ್ರರನ್ನು ಬೇಟೆಯಾಡಿದಂತಾಗಿದೆ.
ಪುಲ್ವಾಮ ಜಿಲ್ಲೆಯ ತ್ರಾಲ್‌ನ ನಾದಿರ್ ಎಂಬಲ್ಲಿ ಎನ್‌ಕೌಂಟರ್ ನಡೆದಿದೆ. ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಉಗ್ರರು ಇಲ್ಲಿ ಅಡಗಿರುವ ಮಾಹಿತಿ ಸಿಕ್ಕಿ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಲಷ್ಕರ್ ಇ ತೈಬಾದ ಮೂವರು ಉಗ್ರರನ್ನು ಶೊಪಿಯಾನ್ ಜಿಲ್ಲೆಯ ಕೆಲ್ಲರ್‌ನಲ್ಲಿ ಭದ್ರತಾ ಪಡೆ ಕೊಂದು ಹಾಕಿತ್ತು.
ಇಂದು ಬಲಿಯಾದ ಮೂರೂ ಉಗ್ರರು ಜಮ್ಮು ಕಾಶ್ಮೀರದ ನಿವಾಸಿಗಳು. ಅವರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಾಸಿರ್ ವಾನಿ ಮತ್ತು ಯವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಜೈಶ್ ಸಂಘಟನೆಯ ಈ ಉಗ್ರರು ದೊಡ್ಡ ವಿಧ್ವಂಸಕ ಕೃತ್ಯ ಎಸಗುವ ಸನ್ನಾಹದಲ್ಲಿದ್ದರು ಎಂದು ಭದ್ರತಾ ಪಡೆ ತಿಳಿಸಿದೆ.